ಸರ್ಕಾರಿ ವೈದ್ಯ ಕಾಲೇಜು : ಎನ್‌ಆರ್‌ಐ ಕೋಟಾಗೆ ಎಐಡಿಎಸ್‌ಓ ಖಂಡನೆ

ಸರ್ಕಾರಿ ವೈದ್ಯ ಕಾಲೇಜು : ಎನ್‌ಆರ್‌ಐ ಕೋಟಾಗೆ ಎಐಡಿಎಸ್‌ಓ ಖಂಡನೆ

ದಾವಣಗೆರೆ, ಮೇ 26- ಸರ್ಕಾರಿ ವೈದ್ಯಕೀಯ ಕಾಲೇಜು ಗಳಲ್ಲಿ ಎನ್‌ಆರ್‌ಐ ಕೋಟಾ ಅಳವಡಿಕೆ ಖಂಡನೀಯವಾಗಿದೆ ಎಂದು ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಅಜಯ್‌ ಕಾಮತ್‌ ತಿಳಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಆರ್ಐ ಕೋಟಾಗೆ ಅನುಮತಿ ನೀಡುವಂತೆ ಎನ್‌ಎಂಸಿ (ನ್ಯಾಷನಲ್ ಮೆಡಿಕಲ್ ಕಮೀಷನ್)ಗೆ ಮನವಿ ಮಾಡಿದೆ. ಈ ನಡೆಯಿಂದಾಗಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಖಾಸಗೀಕರಣದ ದ್ವಾರ ತೆರೆಯಲಿವೆ ಎಂದು ಎಐಡಿಎಸ್‌ಓ ತೀವ್ರವಾಗಿ ಆಕ್ಷೇಪಿಸಿದೆ.

2018ರಲ್ಲಿ ಎನ್‌ಆರ್‌ಐ ಕೋಟಾದ ಪ್ರಸ್ತಾಪ ಬಂದಾಗ ರಾಜ್ಯದ ವಿದ್ಯಾರ್ಥಿಗಳು ಅದನ್ನು ಯಶಸ್ವಿಯಾಗಿ ವಿರೋಧಿಸಿ ಹಿಮ್ಮೆಟ್ಟಿಸಿದ್ದರು. 

ಇಂದು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವರ್ಷಕ್ಕೆ 80 ಸಾವಿರ ರೂ.ಗಳ ಶುಲ್ಕ ಭರಿಸಬೇಕಿದ್ದು, ಬಡ ವಿದ್ಯಾರ್ಥಿಗಳಿಗೆ ಈ ಶುಲ್ಕ ಭರಿಸುವುದೇ ಕಷ್ಟಕರವಾಗಿದೆ.

ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಅವಕಾಶ ಕಿತ್ತುಕೊಳ್ಳುವ ಎನ್‌ಆರ್‌ಐ ಕೋಟಾ ಅಳವಡಿಕೆ ಪ್ರಜಾತಾಂತ್ರಿಕ ಶಿಕ್ಷಣ ವ್ಯವಸ್ಥೆಯ ಮೇಲೆ ನೇರ ದಾಳಿ ಮಾಡಲಿದ್ದು, ವೈದ್ಯ ಕೀಯ ಶಿಕ್ಷಣ ತನ್ನ ಪ್ರಜಾತಾಂತ್ರಿಕ ಗುಣಲಕ್ಷಣ ಕಳೆದುಕೊಂಡರೆ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಅಸಾಧ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!