ದ್ವಿದಳ ಧಾನ್ಯದ ವಿಸ್ತೀರ್ಣ ಹೆಚ್ಚಿಸಲು ಅಂತರ ಬೆಳೆ ಅನುಸರಿಸಿ

ದಾವಣಗೆರೆ, ಮೇ 24- ಜಿಲ್ಲಾ ವ್ಯಾಪ್ತಿಯಲ್ಲಿ 1ಲಕ್ಷ 35ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, ಇತ್ತಿಚೇಗೆ ದ್ವಿದಳ ಧಾನ್ಯ ಬೆಳೆಯುವ ಪ್ರದೇಶ ಕಡಿಮೆಯಾಗಿದೆ. ಆದ್ದರಿಂದ ಮೆಕ್ಕಜೋಳದ ಜತೆಗೆ ಅಂತರ ಬೆಳೆಯಾಗಿ ದ್ವಿದಳ ಧಾನ್ಯ ಬೆಳೆಯುವಂತೆ ಕೃಷಿ ಇಲಾಖೆ ಸಲಹೆ ನೀಡಿದೆ.

ಮೆಕ್ಕೆಜೋಳದಲ್ಲಿ ಮುಸುಕಿನ ಅಂತರ ಬೇಸಾಯ ಅತ್ಯಂತ ಪರಿಣಾಮಕಾರಿ ತಂತ್ರಜ್ಞಾನವಾಗಿದೆ. ಬೆಳೆಗಳ ನಡುವಿನ ಸ್ಥಾನವನ್ನು ಸಾಮರ್ಥ್ಯಪೂರ್ಣವಾಗಿ ಬಳಸಲು ಮತ್ತು ಭೂಮಿಯ ಉತ್ಪಾದಕತೆ ಹೆಚ್ಚಿಸಲು ಸಹಾಯ ಮಾಡಲಿದೆ. ಆದ್ದರಿಂದ ಈ ಪದ್ಧತಿಯಲ್ಲಿ ಕೆಲವು ಅಂಶಗಳು ಬಹುಮುಖ್ಯವಾಗಿವೆ.

ಬೆಳೆಗಳ ಆಯ್ಕೆ : ಮುಸುಕಿನ ಜೋಳದ ಜತೆಗೆ ತೊಗರಿ, ಹೆಸರು, ಅವರೆ, ಅಲಸಂದೆ ಮತ್ತು ಸೋಯಾಬೀನ್‌ ಬೆಳೆಗಳ ಬೇಸಾಯ ಮಾಡಿದಾಗ ಮಣ್ಣಿನ ನೈಸರ್ಗಿಕ ಫಲವತ್ತತೆ ಕಾಯ್ದುಕೊಳ್ಳಲು ಸಹಾಯ ಮಾಡಲಿದೆ.

ಸಾಲುಗಳ ನಡುವೆ ಅಂತರ : ಸಾಲುಗಳ ನಡುವೆ 60-70 ಸೆ.ಮೀ ಅಂತರ ಮತ್ತು ಗಿಡದಿಂದ ಗಿಡಕ್ಕೆ 20-25 ಸೆ.ಮೀ ಅಂತರ ಇರಬೇಕು.

ರೋಗ ನಿರೋಧಕತೆ : ಅಂತರ ಬೆಳೆ ಆಯ್ಕೆ ಮಾಡುವಾಗ ಉಭಯ ಬೆಳೆಗಳಲ್ಲಿ ಸಾಮಾನ್ಯವಾಗಿ ಉಂಟಾಗುವ ರೋಗ ಮತ್ತು ಕೀಟವನ್ನು ಗಮನದಲ್ಲಿಟ್ಟುಕೊಳ್ಳಬೇಕು.

ನೀರಿನ ವ್ಯವಸ್ಥೆ : ಬೆಳೆಗಳಲ್ಲಿ ನೀರಿನ ಒತ್ತಡ ತಪ್ಪಿಸಲು ಸೂಕ್ತ ವ್ಯವಸ್ಥೆ ರೂಪಿಸಬೇಕು.

ಸಾವಯವ ಕೃಷಿ : ಮಣ್ಣು ಹೊದಿಸಲು ಮತ್ತು ಪೋಷಕಾಂಶ ಹೆಚ್ಚಿಸಲು ಸಾವಯವ ಪದ್ಧತಿಗಳಾದ ಹಸುಗೊಬ್ಬರ ಅಥವಾ ಕಾಂಪೋಸ್ಟ್ ಬಳಸುವುದನ್ನು ಸರಿಯಾಗಿ ಅನುಸರಿಸಿದರೆ ಮುಸುಕಿನ ಜೋಳದ ಅಂತರ ಬೇಸಾಯ ಯಶಸ್ವಿಯಾಗುವುದು. 

ಅಂತರ ಬೆಳೆಯ ಲಾಭ : ದಿನನಿತ್ಯದ ಆಹಾರದಲ್ಲಿ ತೊಗರಿ, ಅವರೆ, ಹೆಸರು ಮತ್ತು ಸೋಯಾಬೀನ್ ಅವಿಭಾಜ್ಯ ಅಂಗವಾಗಿದ್ದು, ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್‌ ಹೆಚ್ಚಾಗಿರುವುದರಿಂದ ಏಕದಳ ಧಾನ್ಯಗಳ ಜೊತೆ ನಿತ್ಯದ ಆಹಾರದಲ್ಲಿ ಸಮತೋಲನದ ಪೋಷ ಕಾಂಶ ಪಡೆಯಬಹುದು. ಈ ಬೆಳೆಗಳಿಂದ  ಬೇಳೆಗಳು ಅಲ್ಲದೇ ಹಸಿರು ತರಕಾರಿಯನ್ನೂ ಪಡೆಯಬಹುದು.

error: Content is protected !!