ಯುಪಿಎಸ್ಸಿಯಲ್ಲಿ 101ನೇ ರಾಂಕ್ ಪಡೆದ ಕು.ಸೌಭಾಗ್ಯ ಎಸ್.ಬೀಳಗಿಮಠ, ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಮೊದಲ ರಾಂಕ್ ಪಡೆದ ಅಂಕಿತ ಬಸಪ್ಪ ಹಾಗೂ ಜಿಲ್ಲೆಗೆ ಮೊದಲಿಗರಾದ ಹೆಚ್.ಜಿ. ಗಾನವಿ ಅವರನ್ನು ಅಭಿನಂದಿಸಲಾಗುವುದು. 2021-22 ಮತ್ತು 2022-23ರಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು.
– ದೇವರಮನೆ ಶಿವಕುಮಾರ್, ಜಿಲ್ಲಾಧ್ಯಕ್ಷ,ವೀರಶೈವ ಲಿಂಗಾಯತ ಮಹಾಸಭಾ.
ದಾವಣಗೆರೆ, ಮೇ 23- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ದಿಂದ ಬಸವ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇದೇ ದಿನಾಂಕ 26ರ ಸಂಜೆ 4 ಗಂಟೆಗೆ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಂಡರಗಿ ಮಾಜಿ ಸಚಿವ ಎಸ್.ಎಸ್. ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಬಸವತತ್ವ-ಅನುಷ್ಠಾನದ ದಾರಿಗಳು ಕುರಿತು ಷಹಪುರದ ಬಸವ ಮಾರ್ಗ ಸಂಪಾದಕ ವಿಶ್ವಾರಾಧ್ಯ ಸತ್ಯಂಪೇಟೆ ಉಪನ್ಯಾಸ ನೀಡಲಿದ್ದಾರೆ. ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಎಸ್.ಎಸ್.ಗಣೇಶ್ ಉಪಸ್ಥಿತರಿರಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ, ಕೈಗಾರಿಕಾ ಘಟಕದ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ರಮೇಶ್ ಬಿ.ಜಿ., ಪ್ರಕಾಶ್ ಪಾಟೀಲ್, ಶುಭಾ ಐನಳ್ಳಿ, ಶಿವಕುಮಾರ್, ನಿಧಿ, ಸುನೀಲ್ ಇದ್ದರು.