ಕೆಲಸದ ನೆಪದಲ್ಲಿ ಮಹಾರಾಷ್ಟ್ರದ ವ್ಯಕ್ತಿಗೆ ಮಹಿಳೆ ಮಾರಾಟ

ಕೆಲಸದ ನೆಪದಲ್ಲಿ ಮಹಾರಾಷ್ಟ್ರದ ವ್ಯಕ್ತಿಗೆ ಮಹಿಳೆ ಮಾರಾಟ

ಭದ್ರಾವತಿ ಮೂಲದ ಮೂವರನ್ನು ಬಂಧಿಸಿದ ಹೊನ್ನಾಳಿ ಪೊಲೀಸರು

ಹೊನ್ನಾಳಿ, ಮೇ 21 – ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಅಪಹರಿಸಿ ಮಹಾರಾಷ್ಟ್ರದ ಸೊಲ್ಲಾಪುರದ ವ್ಯಕ್ತಿಗೆ ಮಾರಾಟ ಮಾಡಿದ್ದ ಪ್ರಕರಣವನ್ನು ಹೊನ್ನಾಳಿ ಪೊಲೀಸರು ದೂರು ದಾಖಲಾಗಿ 24 ಗಂಟೆಯೊಳಗೆ ಬೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ವಿವರ; ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದ ಗಂಗಮ್ಮ ತನ್ನ ಗಂಡನ ಮರಣಾನಂತರ 6 ವರ್ಷದ ಮಗುವಿನೊಂದಿಗೆ ತನ್ನ ತವರು ಮನೆಯಲ್ಲೇ ಆಶ್ರಯ ಪಡೆದಿರುತ್ತಾರೆ. ಜೀವನಕ್ಕೆ ಕೂಲಿ ಕೆಲಸ ಮಾಡುತ್ತಿದ್ದು ಆಕಸ್ಮಿಕವಾಗಿ ಪರಿಚಯವಾದ ಭದ್ರಾವತಿಯ ತಂಡವೊಂದು ಇದೇ ದಿನಾಂಕ 12ರಂದು ಭದ್ರಾವತಿಯ ಕಲ್ಯಾಣ ಮಂಟಪದ ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದರು.

 ಆ ದಿನ ರಾತ್ರಿ ಗಂಗಮ್ಮ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದರು. ಮತ್ತೇ 13ರ ಬೆಳಿಗ್ಗೆ ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದು ನಂತರ ಮರಳಿ ಬರಲೇ ಇಲ್ಲ. ಕೆಲಸಕ್ಕೆಂದು ಹೋಗಿರಬಹುದು ಮರಳಿ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಕುಟುಂಬಸ್ಥರಿಗೆ 2-3 ದಿನಗಳ ನಂತರ ರೂಪಾ ಎಂಬುವವರ ಮೊಬೈಲ್ ನಂಬರ್‍ನಿಂದ ಗಂಗಮ್ಮ ಕರೆ ಮಾಡಿ ರೋಜಿಲೀನಾ, ಮಲ್ಲಿಕಾರ್ಜುನ ಮತ್ತು ಲೋಕೇಶ್ ಅವರುಗಳು ನನ್ನನ್ನು ಅಪಹರಿಸಿ ಮಹಾರಾಷ್ಟ್ರದ ಸೊಲ್ಲಾಪುರದ ವ್ಯಕ್ತಿಗೆ 1 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ.

ಹಣ ಕೊಟ್ಟ ವ್ಯಕ್ತಿ ನನ್ನನ್ನು ಮದುವೆ ಮಾಡಿಕೊಂಡು ಮನೆ ಕೆಲಸಕ್ಕೆ ಇರಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ, ನನಗೆ ಇಷ್ಟವಿಲ್ಲ. ನನ್ನನ್ನು ನನ್ನ ಊರಿಗೆ ಕಳುಹಿಸಿಕೊಡಿ ಎಂದು ಬೇಡಿಕೊಂಡಿದ್ದಕ್ಕೆ, ನಾನು ಕೊಟ್ಟ 1 ಲಕ್ಷ ಹಣ ಕೊಟ್ಟರೆ ಮಾತ್ರವೇ ಊರಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದು, ನಂತರ ಅಪಹೃತಳ ಸಹೋದರ ದುರ್ಗಪ್ಪ ಈ ಬಗ್ಗೆ ಮೇ 19 ರಂದು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. 

ಪ್ರಕರಣವನ್ನು ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಾಂತಲಾ ಅವರು ದೂರು ದಾಖಲಿಸಿಕೊಂಡು ಪ್ರತ್ಯೇಕ ತಂಡಗಳನ್ನು ರಚಿಸಿ ಭದ್ರಾವತಿ ಮೂಲದ 3 ಜನ ಆರೋಪಿಗಳನ್ನು ಪತ್ತೆ ಹಚ್ಚಿ ಗಂಗಮ್ಮನವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ವಿರುದ್ಧ ಮಾನವ ಕಳ್ಳ ಸಾಗಾಣಿಕೆ ಪ್ರಕರಣದ ಐಪಿಸಿ ಸೆಕ್ಷನ್ 366, 370 ಮತ್ತು 34ರಡಿಯಲ್ಲಿ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿ ವಿಚಾರಣೆ ನಡೆಸುತ್ತಿರುವುದಾಗಿ ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

error: Content is protected !!