ಸಮಾಜಕ್ಕೆ ಬೇಕು ಸಾಂಸ್ಕೃತಿಕ ಶಕ್ತಿಯ ಪ್ರಭಾವ

ಸಮಾಜಕ್ಕೆ ಬೇಕು ಸಾಂಸ್ಕೃತಿಕ ಶಕ್ತಿಯ ಪ್ರಭಾವ

ಉತ್ತಮ ಆಚಾರ, ನಡೆ-ನುಡಿಗೆ ಸಾಂಸ್ಕೃತಿಕ ಶಕ್ತಿ ಸಹಾಯಕ ; ಎಂ.ಜಿ.ಈಶ್ವರಪ್ಪ

ದಾವಣಗೆರೆ, ಮೇ 19- ಸಮಾಜದಲ್ಲಿ ಸಾಂಸ್ಕೃತಿಕ ಶಕ್ತಿ ಉತ್ತಮವಾಗಿದ್ದರೆ, ಜನರ ಆಚಾರ-ವಿಚಾರ, ನಡೆ-ನುಡಿ ಸರಿಯಾಗಿರುತ್ತವೆ ಎಂದು ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.

ನಮನ ಅಕಾಡೆಮಿ ಮತ್ತು ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ವಿಶ್ವ ನೃತ್ಯ ದಿನದ ಅಂಗವಾಗಿ `ಭರತನಾಟ್ಯಂನ ಮತ್ತು ದಶವಿಧ ಅಡುವು’ಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತ ನೃತ್ಯ ಮತ್ತು ಸಾಹಿತ್ಯವು ಸರಸ್ವತಿಯ ಎರಡು ಮುಖಗಳಿದ್ದಂತೆ. ಸಂಗೀತ ನೃತ್ಯವು ಕಣ್ಣಿಗೆ ಹಾಗೂ ಮನಸ್ಸಿಗೆ ಮಧುರತೆ ನೀಡಿದರೇ ಸಾಹಿತ್ಯವು ಮನುಷ್ಯನ ಚಿಂತನೆ ಹಾಗೂ ಆಲೋಚನೆಗೆ ಅಮೃತವಾಗಲಿದೆ ಎಂದರು.

ವೈವಿಧ್ಯಮಯವಾದ ಭರತನಾಟ್ಯ, ಕೂಚಿಪುಡಿ ಕಲೆಗಳು ನಮ್ಮ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇಮ್ಮಡಿಗೊಳಿಸುತ್ತಿರುವುದು ಸಂತಸದ ವಿಚಾರ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಗ್ರಂಥಾಲಯ ಪ್ರವೇಶಿಸುವ ಜತೆಗೆ ಸಾಂಸ್ಕೃತಿಕ ವಲಯಕ್ಕೂ ಪ್ರಾಮುಖ್ಯತೆ ಕೊಟ್ಟು ಸಂಗೀತ, ನೃತ್ಯ ಮತ್ತು ಆಕರ್ಷಕ ಮಾತುಗಾರಿಕೆ ಕಲಿಯುವ ಮೂಲಕ ಸಾಂಸ್ಕೃತಿಕ ಶಕ್ತಿ ಹೆಚ್ಚಿಸಿಕೊಳ್ಳುವಂತೆ ಮಕ್ಕಳಿಗೆ ಸಲಹೆ ನೀಡಿದರು. ಇಂದಿನ ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೇ ತರಗತಿಯಿಂ ದಾಚೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ವಾಕ್ಚಾತುರ್ಯ ಸೇರಿದಂತೆ ಅನೇಕ ಕೌಶಲ್ಯ ವೃದ್ಧಿ ಸುವ ಶಿಕ್ಷಣದಿಂದ ಸಮಾಜವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವಂತೆ ಕಿವಿಮಾತು ನೀಡಿದರು.

ಜೆಸಿಐನ ಅಂತರರಾಷ್ಟ್ರೀಯ ತರಬೇತುದಾರ ರಾದ ಲತಿಕಾ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಧಿಸಲೇ ಬೇಕೆಂಬ ಛಲ ಇದ್ದರೆ ಜೀವನದಲ್ಲಿ ಯಶಸ್ಸು ಕಾಣುವುದು ಸುಲಭ ಎಂದು ಹೇಳಿದರು.

ಹಿರಿಯ ಪತ್ರಕರ್ತ ಸಿದ್ದಯ್ಯ ಹಿರೇಮಠ್ ಮಾತನಾಡಿ, ಪಾಲಕರು ಮಕ್ಕಳಿಗೆ ಓದುವ ಒತ್ತಡ ಹಾಕುವುದರಿಂದ ಅವರಲ್ಲಿ ಸಾಂಸ್ಕೃತಿಕ ಮೌಲ್ಯ ಹಾಗೂ ಪ್ರಾಪಂಚಿಕ ಜ್ಞಾನದ ಅರಿವು ಕುಗ್ಗುತ್ತಿದೆ ಎಂದರು. ಪ್ರತಿನಿತ್ಯ ಕ್ರೀಡೆ ಹಾಗೂ ನೃತ್ಯಾಭ್ಯಾಸ ದಿಂದ ಉತ್ತಮ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಇಂತಹ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.

ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಧೈರ್ಯ, ತಾಳ್ಮೆ, ಏಕಾಗ್ರತೆ ಹೆಚ್ಚಿಸುತ್ತವೆ ಮತ್ತು ಕೀಳರಿಮೆ ಮನೊಭಾವನೆಯನ್ನು ದೂರ ತಳ್ಳುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಕಮಲಾ ಸೊಪ್ಪಿನ್, ನಮನ ಅಕಾಡೆಮಿಯ ಕಾರ್ಯದರ್ಶಿ ಡಿ.ಕೆ. ಮಾಧವಿ, ಅಧ್ಯಕ್ಷ ಗೋಪಾಲಕೃಷ್ಣ, ಐಕ್ಯೂಎಸಿ ಸಂಯೋಜಕ ಆರ್.ಆರ್. ಶಿವಕುಮಾರ್, ಹಳೇ ವಿದ್ಯಾರ್ಥಿ ಸಂಘದ ಸಂಯೋಜಕರಾದ ಡಾ.ಕವಿತಾ ಮತ್ತು ವಿದ್ಯಾರ್ಥಿಗಳು ಇದ್ದರು.

error: Content is protected !!