ದಾವಣಗೆರೆ, ಮೇ 17- ವೈಜ್ಞಾನಿಕ ಯುಗ ದಲ್ಲೂ ಹಲವಾರು ಮನೆ ಹಾಗೂ ಮಠಗಳಲ್ಲಿ ವೈದಿಕ ಸಂಸ್ಕೃತಿ ಜಾರಿಯಲ್ಲಿದೆ ಎಂದು ಸಂಸ್ಕೃತಿ ಚಿಂತಕ ಡಾ. ಬಸವರಾಜ ನೆಲ್ಲಿಸರ ಹೇಳಿದರು.
ಅಖಿಲ ಭಾರತ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಕಳೆದ ವಾರ ಏರ್ಪಡಿಸಿದ್ದ ಆನ್‌ಲೈನ್‌ನಲ್ಲಿ ಅರಿವಿನ ಮನೆಯ ಶರಣ ಚಿಂತನಗೋಷ್ಠಿ-7ರಲ್ಲಿ ಅವರು ಮಾತನಾಡಿದರು.
12ನೇ ಶತಮಾನದ ಬಸವಾದಿ ಶರಣರು ಜೀವ ವಿರೋಧಿಯಾದ ಸ್ಥಾವರ ತತ್ವ ಮತ್ತು ಕರ್ಮ ಸಿದ್ಧಾಂತಕ್ಕೆ ಬದಲಾಗಿ, ಜೀವ ಪರವಾದ ಜಂಗಮ ತತ್ವ ಮತ್ತು ಕಾಯಕ ಸಿದ್ಧಾಂತ ಜಾರಿಗೆ ತಂದು ಲೋಕದ ಸಕಲರಿಗೂ ಲೇಸು ಬಯಸಿದ್ದಾರೆ ಎಂದು ಹೇಳಿದರು.
ಜಾತಿ ಮತ್ತು ಧರ್ಮವನ್ನು ರಾಜಕೀಯ ಕೋಸ್ಕರ ಮಾರಾಟದ ವಸ್ತುವನ್ನಾಗಿಸಿ, ಬಡ ಜನತೆ ಮತ್ತು ಹಿಂದುಳಿದ ವರ್ಗದವರ ಶೋಷಣೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಲೋಕ ಶಾಂತಿಯಿಂದ ಇರಬೇಕಾದರೆ ಗುರಿ ಮತ್ತು ಮಾರ್ಗದ ಪವಿತ್ರ ಮುಖ್ಯ. ಈ ನಿಟ್ಟಿನಲ್ಲಿ 12ನೇ ಶತಮಾನದ ಬಸವಾದಿ ಶರಣರು ಸಹ ಗುರಿ ಮತ್ತು ಮಾರ್ಗವನ್ನು ಪವಿತ್ರತೆಯಿಂದ ಕಾಪಾಡಿ, ರಾಜಾಶ್ರಯದ ಸಾಹಿತ್ಯವನ್ನು ಜನ ಸಾಮಾನ್ಯರ ಸಾಹಿತ್ಯವನ್ನಾಗಿಸಿದ್ದರು ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಡಾ.ಎಂ.ಜಿ ಈಶ್ವರಪ್ಪ ಮಾತನಾಡಿ, ಸಂಸ್ಕೃತ ಯುಗವನ್ನು ಬಸವಾದಿ ಶರಣರು ಕನ್ನಡ ಯುಗ ಮಾಡಿದರು. ಜನರಾಡುವ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಸಿ ಕೆಳ ವರ್ಗದ ಜನರನ್ನು ಸಮಾಜದ ಮುನ್ನೆ ಲೆಗೆ ಬರುವಂತೆ ಮಾಡಿದ್ದರು ಎಂದು ಹೇಳಿದರು.
ಬಸವಣ್ಣನವರು ಅನುಭವ ಮಂಟಪ ಮತ್ತು ಮಹಾಮನೆಯ ಕಲ್ಪನೆಯಿಂದ ಉತ್ತಮ ಸಮಾಜ ನಿರ್ಮಿಸಲು ಪ್ರಯತ್ನಿಸಿದ್ದರು. ಈ ನಿಟ್ಟಿನಲ್ಲಿ ಅನುಭವ ಮಂಟಪದಿಂದ ಕಲ್ಯಾಣ ರಾಜ್ಯ, ಮಹಾಮನೆಯಿಂದ ಸಮ-ಸಮಾಜ ಸೃಷ್ಟಿಯಾಯಿತು ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ತುಮಕೂರು ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ, ದೆಹಲಿ ಘಟಕದ ಅಧ್ಯಕ್ಷ ಎನ್.ಪಿ. ಚಂದ್ರಶೇಖರ್, ಡಾ. ರಣಧೀರ್, ಗೀತಾ ಬಸವರಾಜ್, ಎನ್.ಟಿ. ಸಣ್ಣಮಂಜುನಾಥ ಇದ್ದರು.
ಬಿ.ಟಿ.ಪ್ರಕಾಶ್ ಪ್ರಾರ್ಥನೆ ಮತ್ತು ವಚನ ಮಂಗಳ ನಡೆಸಿಕೊಟ್ಟರು. ಆರ್. ಸಿದ್ದೇಶಪ್ಪ ಸ್ವಾಗತಿಸಿದರು. ಭರ್ಮಪ್ಪ ಮೈಸೂರ್ ನಿರೂಪಿಸಿದರು.