ಜಿಲ್ಲೆಯಲ್ಲಿ 6ನೇ ಸ್ಥಾನದಲ್ಲಿದ್ದ ರಾಣೇಬೆನ್ನೂರು ತಾಲ್ಲೂಕು 3ನೇ ಸ್ಥಾನಕ್ಕೆ
ರಾಣೇಬೆನ್ನೂರು, ಮೇ 12- ತಾಲ್ಲೂಕಿನಲ್ಲಿ ಈ ಬಾರಿ 4613 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದು, ಅದರಲ್ಲಿ 3754 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಜಿಲ್ಲೆಯಲ್ಲಿ 6ನೇ ಸ್ಥಾನದಲ್ಲಿದ್ದ ರಾಣೇಬೆನ್ನೂರು ತಾಲ್ಲೂಕು 3 ಸ್ಥಾನಕ್ಕೆ ಬಂದಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿರ್ವಹಣೆ ತರಬೇತಿ ಅವಶ್ಯಕವಾಗಿದೆ. ಈ ದಿಸೆಯಲ್ಲಿ, ವಿದ್ಯಾ ರ್ಥಿಗಳು ಪರೀಕ್ಷಾ ಭಯ ಕಳೆದುಕೊಂಡು, ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎನ್ನುವ ಕುರಿತು ಆನ್ಲೈನ್ನಲ್ಲಿ 3 ಸಾವಿರ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಗಿತ್ತು. ಜೊತೆಗೆ ಶಿಕ್ಷಕರಲ್ಲಿನ ಗುಣಮಟ್ಟದ ಬೋಧನೆ ಈ ಫಲಿತಾಂಶ ಬರಲು ಸಾಧ್ಯವಾಯಿತು ಎಂದು ಶಾಸಕ ಪ್ರಕಾಶ ಕೋಳಿವಾಡ ಪತ್ರಿಕೆಯವರ ಪ್ರಶ್ನೆಗೆ ಉತ್ತರಿಸಿದರು.
ಪ್ರತಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಮೂಲಕ ವಿದ್ಯಾರ್ಥಿಗಳಿಗೆ ಇಂತಹ ಬೋಧನಾ ಕ್ರಮ ಕೈಗೊಳ್ಳಬೇಕಿದೆ. ಪ್ರತಿಯೊಬ್ಬ ಶಿಕ್ಷಕರು ಅರ್ಹತೆಯ ಆಧಾರಿತ ರಾಗಿದ್ದು, ಅವರು ತಮ್ಮ ಕರ್ತವ್ಯದ ಫಲವನ್ನು ಪ್ರತಿ ವಿಧ್ಯಾರ್ಥಿಗೆ ಧಾರೆ ಎರೆದರೆ ಈ ರೀತಿ ಫಲಿತಾಂಶದಲ್ಲಿ ಸುಧಾರಣೆ ಆಗಲಿದೆ ಎಂದು ಅವರು ಅಭಿಪ್ರಾಯಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಯ ಮೂಲಕ ಬದಲಾವಣೆ ತರಬೇಕಿದೆ. ವಿದೇಶಗಳಲ್ಲಿ ಸಂಶೋಧನೆ ಕಾರ್ಯಕ್ಕೆ ಶೇ. 4 ರಷ್ಟು ಹಣ ಇಟ್ಟರೆ ನಮ್ಮ ದೇಶದಲ್ಲಿ ಶೇ. 2 ಇಡಲಾಗುತ್ತಿದೆ. ಒಟ್ಟಾರೆ ವ್ಯವಸ್ಥೆಯ ಬದಲಾವಣೆ ಅವಶ್ಯವಿದೆ ಎಂದು ಹೇಳಿದ ಶಾಸಕರು, ತಮ್ಮ ಅನುದಾನದ ಶೇ. 90 ರಷ್ಟನ್ನು ಶಿಕ್ಷಣಕ್ಕೆ ವ್ಯಯಿಸುವುದಾಗಿ ವಿವರಿಸಿದರು.
`ಇಂಡಿಯಾ’ಕ್ಕೆ ಬಹುಮತ: ಈ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಸೇರಿದಂತೆ ರಾಜ್ಯದಲ್ಲಿ 20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಹಾಗೂ ಕೇಂದ್ರದಲ್ಲಿ `ಇಂಡಿಯಾ’ ಒಕ್ಕೂಟ ಬಹುಮತ ಗಳಿಸಲಿದೆ ಎಂದು ಶಾಸಕ ಪ್ರಕಾಶ ವಿಶ್ವಾಸ ವ್ಯಕ್ತಪಡಿಸಿದರು.