ದಾವಣಗೆರೆ, ಮೇ 12 – ಕೊಗ್ಗನೂರಿನ ನಿಂಗಮ್ಮ ಕೋಂ ನಾಗಪ್ಪ ಎಂಬುವವರ ಜಮೀನಿಗೆ ಸಂಬಂಧಿಸಿದ ಪಹಣಿ ಸರಿಪಡಿಸುವುದು ತಹಶೀಲ್ದಾರ್ ಕಚೇರಿಯಲ್ಲಿ ವಿಳಂಬವಾಗುತ್ತಿದೆ. ಈ ವಿಷಯ ಸರಿಪಡಿಸದೇ ಇದ್ದರೆ ಮೇ 27ರಿಂದ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ದಾವಣಗೆರೆ ಜಿಲ್ಲಾ ಸಮಿತಿ (ಪುಟ್ಟಣ್ಣಯ್ಯ ಬಣ)ಯ ಜಿಲ್ಲಾ ಅಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಣಿ ಸರಿಪಡಿಸುವಂತೆ ಒಂದು ವರ್ಷದಿಂದ ಪದೇ ಪದೇ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಲಾಗಿದೆ. ತಹಶೀಲ್ದಾರ್ ಕಚೇರಿಗೂ ಮನವಿ ಸಲ್ಲಿಸಲಾಗಿದೆ. ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದರು.
ಪೋಡಿ ಹಾಗೂ ಸರ್ವೇಗಳ ಹಲವಾರು ದೂರು ಗಳು ತ್ವರಿತವಾಗಿ ಇತ್ಯರ್ಥವಾಗುತ್ತಿಲ್ಲ. ರೈತರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಈ ಬಗ್ಗೆ ತ್ವರಿತ ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಹನುಮಂತಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಎಸ್.ಟಿ. ಪರಮೇಶ್ವರಪ್ಪ, ಐಗೂರು ಶಿವಮೂರ್ತಪ್ಪ, ಕೊಗ್ಗನೂರು ಹನುಮಂತಪ್ಪ, ಕರಿಲಕ್ಕೇನಹಳ್ಳಿ ಹನುಮಂತಪ್ಪ, ಸಿಡ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.