ದಾವಣಗೆರೆ, ಮೇ 7 – ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕಾನೂನು ಬಾಹಿರವಾಗಿ ತಮ್ಮ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಮತದಾನ ಮಾಡುವುದನ್ನು ನೋಡಿದ್ದಾರೆ ಹಾಗೂ ಇಂಥದೇ ಪಕ್ಷಕ್ಕೆ ಮತದಾನ ಮಾಡುವಂತೆ ತಿಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆಕ್ಷೇಪಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗೆ ಅವರ ಪತಿಯು ನಿರ್ದಿಷ್ಟ ಚಿಹ್ನೆಗೆ ಮತ ನೀಡುವಂತೆ ಹೇಳುವ ವಿಡಿಯೋ ವೈರಲ್ ಆಗಿದೆ. ಇದರಿಂದ ಅವರ ತಿಳುವಳಿಕೆ ಎಷ್ಟಿದೆ ಎಂಬುದು ಗೊತ್ತಾಗುತ್ತಿದೆ ಎಂದು ಹೇಳಿದರು.
ಸಂಸದ ಸಿದ್ದೇಶ್ವರ ಹಾಗೂ ಗಾಯತ್ರಿ ಸಿದ್ದೇಶ್ವರ ದಂಪತಿ ನಗರದ ಮಾಗನೂರು ಬಸಪ್ಪ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದ್ದರು.
ಮತದಾನದ ಗೌಪ್ಯತೆ ಉಲ್ಲಂಘನೆ ಸಂಸದರ ವಿರುದ್ಧ ದೂರು ದಾಖಲು
ದಾವಣಗೆರೆ, ಮೇ 7 – ಮತದಾನದ ಗೌಪ್ಯತೆ ಉಲ್ಲಂಘಿಸಿದ ಆರೋಪದ ಮೇಲೆ ಸಂಸದ ಜಿ.ಎಂ. ಸಿದ್ದೇಶ್ವರ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸಂಸದ ಸಿದ್ದೇಶ್ವರ ಹಾಗೂ ಅವರ ಪತ್ನಿ – ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರು ಮಾಗನೂರು ಬಸಪ್ಪ ಪಬ್ಲಿಕ್ ಶಾಲೆಯ 236ನೇ ಮತಗಟ್ಟೆಯಲ್ಲಿ ಮತದಾನ ಮಾಡಿದ್ದರು.
ಗಾಯತ್ರಿ ಸಿದ್ದೇಶ್ವರ ಅವರು ಮತದಾನ ಮಾಡುತ್ತಿರುವುದನ್ನು ಸಂಸದ ಸಿದ್ದೇಶ್ವರ ನೋಡುತ್ತಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಈ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ಸಹಾಯಕ ಚುನಾವಣಾಧಿಕಾರಿಗಳು ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥ ಎನ್.ಆರ್. ರಾಜೇಶ್ ಕುಮಾರ್ ಅವರಿಗೆ ತಿಳಿಸಿದ್ದರು.
ಅದರಂತೆ ರಾಜೇಶ್ ಕುಮಾರ್ ಅವರು ಗೌಪ್ಯತೆ ಉಲ್ಲಂಘನೆ ಆರೋಪದ ಮೇಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗೌಪ್ಯತೆ ಉಲ್ಲಂಘನೆಯಾದ ಬಗ್ಗೆ ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ ನೋಟಿಸ್ ನೀಡಿ ವಿವರಣೆ ನೀಡಲು ಸೂಚಿಸಲಾಗಿದೆ.
ಮೊದಲು ಸಂಸದರು ಮತದಾನ ಮಾಡಿದರು. ನಂತರ ಗಾಯತ್ರಿ ಸಿದ್ದೇಶ್ವರ ಮತ ಚಲಾಯಿಸಿದರು. ಗಾಯತ್ರಿ ಸಿದ್ದೇಶ್ವರ ಮತದಾನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿರಲಿಲ್ಲ. ಆಗ ಸಿದ್ದೇಶ್ವರ ಅವರು ಮತಪೆಟ್ಟಿಗೆಯ ಬಳಿ ತೆರಳಿ, ಪತ್ನಿಯೊಂದಿಗೆ ಮತ ಚಲಾವಣೆ ಪ್ರಕ್ರಿಯೆ ವೀಕ್ಷಿಸಿದರು. ಈ ಘಟನೆಯ ವಿಡಿಯೋ ಬೆಳಕಿಗೆ ಬಂದು ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್, ಈ ಘಟನೆಯ ಬಗ್ಗೆ ಎ.ಆರ್.ಒ. ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಮತದಾನ ಪ್ರಕ್ರಿಯೆ ಗೌಪ್ಯತೆಯ ಉಲ್ಲಂಘನೆಯಾಗಿದ್ದರೆ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸದ ಜಿ.ಎಂ. ಸಿದ್ದೇಶ್ವರ, ಗೌಪ್ಯತೆಯ ಯಾವುದೇ ಉಲ್ಲಂಘನೆಯಾಗಿಲ್ಲ. ಮತದಾನ ಪ್ರಕ್ರಿಯೆಯನ್ನು ನಾನು ವೀಕ್ಷಿಸಿಲ್ಲ ಎಂದಿದ್ದಾರೆ.