ಸಂಸದ ಸಿದ್ದೇಶ್ವರ ಸುಳ್ಳಿನ ಸರದಾರ : ಶಾಸಕ ಶಿವಗಂಗಾ ತಿರುಗೇಟು
ಚನ್ನಗಿರಿ,ಮೇ 5- ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದು ನಾನು ಮತ್ತು ಮಾಡಾಳು ವಿರೂಪಾಕ್ಷಪ್ಪ ಎಂದು ಸಂತೇಬೆನ್ನೂರಿನಲ್ಲಿ ಹೇಳಿಕೆ ನೀಡಿರುವ ಸಂಸದ ಜಿ.ಎಂ ಸಿದ್ಧೇಶ್ವರ ಅವರು ಸುಳ್ಳಿನ ಸರದಾರ. ಇಂತಹ ಸುಳ್ಳುಗಳನ್ನು ಹೇಳಿಯೇ ನಾಲ್ಕು ಬಾರಿ ಗೆದ್ದಿರುವುದು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಖಾರವಾಗಿ ತಿರುಗೇಟು ನೀಡಿದ್ದಾರೆ.
ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಜಾರಿ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಬರಲಿ, ದಾಖಲೆ ಸಹಿತ ನಾನು ವಿವರಿಸುತ್ತೇನೆ ಎಂದು ಸಿದ್ದೇಶ್ವರ ಅವರಿಗೆ ಸವಾಲು ಕೂಡಾ ಹಾಕಿದ್ದಾರೆ.
2015-16 ನೇ ಸಾಲಿನಲ್ಲಿ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯ ಭಾಷಣದಲ್ಲಿ ಸಂತೇಬೆನ್ನೂರು ಮತ್ತು ಕಸಬಾ ಹೋಬಳಿಗಳಲ್ಲಿ 2 ಹಂತದಲ್ಲಿ ಏತ ನೀರಾವರಿ ಯೋಜನೆ ಕೈಗೊಳ್ಳುವ ಬಗ್ಗೆ ಘೋಷಣೆ ಮಾಡಿದ್ದರು. ಅದರಂತೆ ನೀರಾವರಿ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದೆ. ವರದಿ ಅನುಸಾರ ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳ (ಚನ್ನಗಿರಿ ಕಸಬಾ ಹೋಬಳಿ 46 ಕೆರೆಗಳು) ಒಟ್ಟು 121 ಕೆರೆಗಳಿಗೆ ನೀರೊದಗಿಸುವುದು ಯೋಜನೆ ಉದ್ದೇಶವಾಗಿತ್ತು.
23.06.2016ರಂದು ನೀರಾವರಿ ಇಲಾಖೆ ಯಿಂದ ಈ ಯೋಜನಾ ವರದಿಯನ್ನು 15ನೇ ಅಂದಾಜು ಪರಿಶೀಲನಾ ಸಮಿತಿ ಸಭೆಯಲ್ಲಿ ಮಂಡಿಸ ಲಾಗಿತ್ತು ಎಂದು ಶಿವಗಂಗಾ ಮಾಹಿತಿ ನೀಡಿದ್ದಾರೆ.
ನಂತರ 19.08.2016 ರಲ್ಲಿ ರೂ. 415.68 ಕೋಟಿಗಳ ಯೋಜನೆ ಅನು ಮೋದನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ದಿನಾಂಕ 11.01.2017 ರಂದು ಸಾಸ್ವೇಹಳ್ಳಿ ಏತ ನೀರಾವರಿ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿತು. ಈ ಯೋಜನೆ ಜಾರಿಗೆ ಬರಲು ಮಾಜಿ ಶಾಸಕ ವಡ್ನಾಳ್ ರಾಜಣ್ಣ ಸೇರಿದಂತೆ ಕಾಂಗ್ರೆಸ್ ಮುಖಂಡರ ಶ್ರಮ, ಹೋರಾಟ ಕೂಡ ಇದೆ ಎಂದು ಅವರು ಸರ್ಕಾರಿ ದಾಖಲೆ ಸಮೇತ ವಿವರಿಸಿದ್ದಾರೆ.
ಬಿಜೆಪಿ ಪಕ್ಷದವರು ಚುನಾವಣೆ ವೇಳೆ ಸುಳ್ಳುಗಳನ್ನು ಸೃಷ್ಟಿ ಮಾಡುತ್ತಾರೆ ಎಂಬುದಕ್ಕೆ ಸಂಸದರು ಹೇಳಿದ ಸುಳ್ಳೇ ಸಾಕ್ಷಿ. ಬಿಜೆಪಿ ಎಂದರೆ ಸುಳ್ಳು ಎಂದೇ ಪ್ರಖ್ಯಾತಿ, ಇಂಥ ಸುಳ್ಳುಗಳನ್ನು ಜನರು ನಂಬುವುದಿಲ್ಲ, ಬಿಜೆಪಿಯವರು ಒಂದಾದರೂ ಸತ್ಯ ಹೇಳಿ ಮತ ಕೇಳಲಿ, ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸಬಾರದು. ಸೋಲಿನ ಭಯದಿಂದ ಇಂಥ ಸುಳ್ಳುಗಳನ್ನು ಅವರು ಹೇಳುತ್ತಿದ್ದಾರೆ ಎಂದು ಬಸವರಾಜು ಟೀಕಿಸಿದ್ದಾರೆ.