ಜಿ.ಎಂ.ಸಿದ್ದೇಶ್ವರ, ಮಲ್ಲಿಕಾರ್ಜುನ್ ಕೊಡುಗೆಗಳ ಬಹಿರಂಗ ಚರ್ಚೆ

ರವಿಕುಮಾರ್ ಸವಾಲು

ದಾವಣಗೆರೆ, ಏ. 29 – ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ನೀಡಿರುವ ಕೊಡುಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ನೀಡಿರುವ ಕೊಡುಗೆಯ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಸಚಿವರಿಗೆ ಸವಾಲೆಸೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಗೆ ಸಂಸದ ಸಿದ್ದೇಶ್ವರ ಅವರ ಕೊಡುಗೆ ಏನೂ ಇಲ್ಲ ಎಂದು ಮಲ್ಲಿಕಾರ್ಜುನ್ ಅವರು ಹೇಳಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ. ವಿಶೇಷವಾಗಿ ಕಳೆದ ಒಂದು ವರ್ಷದಲ್ಲಿ ಸಚಿವರು ಜಿಲ್ಲೆಗೆ ನೀಡಿರುವ ಕೊಡು ಗೆಗಳ ಬಗ್ಗೆ ಚರ್ಚೆಯಾಗಬೇಕಿದೆ ಎಂದು ಹೇಳಿದರು.

ಸಿದ್ದೇಶ್ವರ ಅವರ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಬಂದಿದೆ.  ರೈಲ್ವೆ ನಿಲ್ದಾಣದ ಅಭಿವೃದ್ಧಿ, ಬಸ್ ನಿಲ್ದಾಣ ಅಭಿವೃದ್ಧಿ, ವಂದೇ ಭಾರತ್ ರೈಲು, ಪಾಸ್‌ಪೋರ್ಟ್ ಕೇಂದ್ರ, ಜಲ ಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಇ.ಎಸ್.ಐ. ಆಸ್ಪತ್ರೆ ಉನ್ನತೀಕರಣ, 790 ಕಿ.ಮೀ. ಗ್ರಾಮ ಸಡಕ್ ರಸ್ತೆ, ಕೇಂದ್ರೀಯ ವಿದ್ಯಾಲಯ ಸ್ಥಾಪನೆ, ಎಸ್.ಟಿ.ಪಿ.ಐ. ಘಟಕ ಸ್ಥಾಪನೆ, ದಿವ್ಯಾಂಗರ ಚಿಕಿತ್ಸಾ ಘಟಕ ಸೇರಿದಂತೆ ಸಾಲು ಸಾಲು ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದವರು ತಿಳಿಸಿದರು.

ಈ ಬಗ್ಗೆ ಯಾವ ಸರ್ಕಲ್‌ನಲ್ಲಿ ಬೇಕಾದರೂ ಚರ್ಚೆಗೆ ಸಿದ್ಧವಿದ್ದೇವೆ. ನೀವೂ- ನಾನೂ ಬೆಣ್ಣೆ ದೋಸೆ ತಿನ್ನುತ್ತಾ  ಚರ್ಚೆ ಮಾಡೋಣ. ಈ ಚರ್ಚೆಗೆ ನನ್ನೊಂದಿಗೆ ಸಂಸದ ಸಿದ್ದೇಶ್ವರ ಅವರೂ ಬರಲಿದ್ದಾರೆ, ನೀವೂ ಬನ್ನಿ ಎಂದು ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪೂರ್, ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿದ್ದರು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ರೈತರಿಗೆ ಯಾವುದೇ ನೆರವು ನೀಡುತ್ತಿಲ್ಲ. ಸರ್ಕಾರ ದಿವಾಳಿ ಆಗಿದೆಯಾ? ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದಲ್ಲಿ ಯಾವುದೇ ದೊಡ್ಡ ಯೋಜನೆ ಜಾರಿಗೆ ಬರುತ್ತಿಲ್ಲ.  ಗ್ಯಾರಂಟಿಗಳ ಕಾರಣದಿಂದ ಸರ್ಕಾರ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸ್ಥಾನ ದೊರೆತರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಧಕ್ಕೆಯಾಗಲಿದೆ ಎಂಬುದು ಸರಿಯಲ್ಲ. 135 ಶಾಸಕರ ಬೆಂಬಲ ಇರುವವರೆಗೂ ಅವರು ಮುಂದುವರೆಯುತ್ತಾರೆ. ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ. ಇದರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸೊನ್ನೆ ಸ್ಥಾನ ದೊರೆತರೂ ಸಿದ್ದರಾಮಯ್ಯ ಅವರ ಕುತ್ತಿಗೆಗೆ ಬರಲ್ಲ. ಇದು ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡುವಿನ ಸ್ಪರ್ಧೆ ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್, ಮುಖಂಡರಾದ ಕೊಳೇನಹಳ್ಳಿ ಸತೀಶ್, ಬೆಳವನೂರು ನಾಗೇಶ್ವರ ರಾವ್, ಗಣೇಶ ದಾಸಕರಿಯಪ್ಪ, ಮಹೇಂದ್ರ ಹೆಬ್ಬಾಳ್, ಐರಣಿ ಅಣ್ಣೇಶ್, ರಾಜನಹಳ್ಳಿ ಶಿವಕುಮಾರ್, ಬಿಳಿಚೋಡು ಬೈರೇಶ್, ರಘುನಂದನ್ ಅಂಬರ್‌ಕರ್, ಕುಂದುವಾಡದ ಗಣೇಶಪ್ಪ, ಹೆಚ್.ಎನ್. ಗುರುಮೂರ್ತಿ, ಶಿರಮಗೊಂಡನಹಳ್ಳಿ ಶಿವಮೂರ್ತೆಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!