ದಾವಣಗೆರೆ, ಏ. 23 – ತಾಲ್ಲೂಕಿನ ಹೆಮ್ಮನಬೇತೂರು ಗ್ರಾಮದಲ್ಲಿ ಮರುಳಸಿದ್ದೇಶ್ವರ ಸ್ವಾಮಿಯ ರಥೋತ್ಸವ ಬರದ ನಡುವೆ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನವನ್ನು ಬಾಳೆ ಕಂಬ, ಮಾವಿನ ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು. ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವದೊಂದಿಗೆ ಬಾಜಾ ಭಜಂತ್ರಿಯೊಂದಿಗೆ ಶ್ರೀ ಮರುಸಿದ್ದ ಸ್ವಾಮಿಯನ್ನು ರಥ ಬೀದಿಯಲ್ಲಿ ಮೆರವಣಿಗೆ ಮೂಲಕ ತಂದು ರಥೋತ್ಸವವನ್ನು ಮೂರು ಸುತ್ತು ಪ್ರದಕ್ಷಣೆ ಹಾಕಿದರು.
ಶ್ರೀ ಮರುಳುಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿಯು ರಥ ಏರುತ್ತಿದ್ದಂತೆಯೇ ರಥದ ಗಾಲಿಗೆ ಎಡೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡುತ್ತಿದ್ದಂತೆಯೇ ಭಕ್ತರು ಮರುಳು ಸಿದ್ಧೇಶ್ವರ ಮಹಾಸ್ವಾಮಿಗೆ ಜಯವಾಗಲಿ ಎಂದು ಜೈಕಾರ ಹಾಕಿದರು.
ನಂತರ ಸ್ವಾಮಿಯ ಪಟ ಹರಾಜು ಕಾರ್ಯಕ್ರಮ ನಡೆಯಿತು. ಭಕ್ತರು ಕಾಯಿ ಒಡೆದು ರಥೋತ್ಸವಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಥ ಬೀದಿಯಲ್ಲಿ ನಿಂತಿದ್ದ ಭಕ್ತರು ರಥ ಚಲಿಸುತ್ತಿದ್ದಂತೆಯೇ ಕೈಮುಗಿದು ಭಕ್ತಿ ಸಮರ್ಪಿಸಿದರು.