ಸಂಸದರ ನಡೆಗೆ ಬೇಸತ್ತು ಕಾಂಗ್ರೆಸ್ ಸೇರ್ಪಡೆ

ಸಂಸದರ ನಡೆಗೆ ಬೇಸತ್ತು ಕಾಂಗ್ರೆಸ್ ಸೇರ್ಪಡೆ

ನಾಳೆ ಎಸ್ಸೆಸ್-ಎಸ್ಸೆಸ್ಸೆಂ ನೇತೃತ್ವದಲ್ಲಿ ವಿಧ್ಯುಕ್ತವಾಗಿ ಸೇರ್ಪಡೆ: ಹೆಚ್.ಎಸ್. ನಾಗರಾಜ್

ದಾವಣಗೆರೆ, ಏ.21- ಸಂಸದ ಜಿ.ಎಂ. ಸಿದ್ದೇಶ್ವರ ಅವರ ನಡೆಗೆ ಬೇಸತ್ತು ಕಾಂಗ್ರೆಸ್ ಸೇರುತ್ತಿರುವುದಾಗಿ ಯುವ ಮುಖಂಡ ಹೆಚ್.ಎಸ್. ನಾಗರಾಜ್ ಹೇಳಿದ್ದಾರೆ.

ನಗರದ ಚೇತನಾ ಹೋಟೆಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು,  ನಾಡಿದ್ದು ದಿನಾಂಕ 23ರ ಮಂಗಳವಾರ ಬೆಳಿಗ್ಗೆ 11ಕ್ಕೆ ರೇಣುಕ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಮಕ್ಷಮದಲ್ಲಿ ವಿಧ್ಯುಕ್ತವಾಗಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದೇನೆ. ಈ ವೇಳೆ ವಿವಿಧ ತಾಲ್ಲೂಕು ಮುಖಂಡರು ಸಹ ಸೇರಲಿದ್ದಾರೆ ಎಂದರು.

2009ರಲ್ಲಿ ನಾನು ಬಿಜೆಪಿ ಸೇರುವಾಗ ಭಾರೀ ಸ್ವಾಗತ ಕೋರಿದ್ದರು. ಈಗ ಅವರಿಗೆ ಶಿವಪ್ಪನವರ ಒಬ್ಬ ಮಗ ಬೇಕಾಗಿದ್ದಾನೆ. ಇನ್ನೊಬ್ಬ ಮಗ ನಾನು ಬೇಡವಾಗಿದ್ದೇನೆ. ಹೀಗೆ ಕುಟುಂಬದಲ್ಲೇ ಒಡಕುಂಟು ಮಾಡಿರುವ ಅವರು ನನಗೆ ವೈಯಕ್ತಿಕವಾಗಿ ಬಹಳ ನೋವು ನೀಡಿದ್ದಾರೆ ಎಂದು ತಿಳಿಸಿದರು.

ಕಾರ್ಮಿಕರು ಹಾಗೂ ರೈತರ ಅನುಕೂಲಕ್ಕಾಗಿ  ಭದ್ರಾ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಮಾಡುವುದಾಗಿ ಭರವಸೆ ನೀಡಿ  ಮಾತು ತಪ್ಪಿದರು. ನಂತರ ತಾವೇ ಕಾರ್ಖಾನೆ ಖರೀದಿಗೆ ಮುಂದಾದರು ಎಂದು ನಾಗರಾಜ್ ಆರೋಪಿಸಿದರು.

ನಾನು ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಾಗರಾಜ್, ಯಾವುದೇ ಜವಾಬ್ದಾರಿಯನ್ನು ಪಕ್ಷ ನೀಡಿದರೆ ಅದನ್ನು ನಿಭಾಯಿಸುತ್ತೇನೆ ಎಂದು ತಿಳಿಸಿದರು.

ಪಕ್ಷ ಬಿಟ್ಟು ಹೋಗುವವರು ಪಕ್ಷ ವಿರೋಧಿಗಳು ಎಂದು ಹೇಳುತ್ತಾರೆ. ಆದರೆ ಬಿಜೆಪಿ ಸಂಸದನಾಗಿ ಸಿದ್ದೇಶ್ವರ ಅವರು ಕೆಜೆಪಿ (ಕರ್ನಾಟಕ ಜನತಾ ಪಕ್ಷ)ಯ ಟಿಕೆಟ್ ಹಂಚಿರುವುದು ನನಗೆ ಗೊತ್ತಿದೆ. ಸಿಕ್ಕ ಸಿಕ್ಕವರನ್ನು ಉಚ್ಛಾಟನೆ ಮಾಡುವ ನೀವೆಷ್ಟು ಪ್ರಾಮಾಣಿಕರಾಗಿದ್ದೀರಿ? ಎಂದು ಪ್ರಶ್ನಿಸಿದರು.

ಸಂಸದರು ಸ್ವಂತ ಅಭಿವೃದ್ಧಿಗೆ ನಿಂತಿದ್ದಾರೆ. ತಾವು ಅಧಿಕಾರ ಅನುಭವಿಸುತ್ತಾ ಉಳಿದವರಿಗೆ ನೋವು ಕೊಡುವ ಕೆಲಸ ಮಾಡುತ್ತಿದ್ದಾರೆ. ನಮ್ಮಂತವರನ್ನು ಬಳಸಿ ಬಿಸಾಕುವ ನಿಮಗೆ ಮತದಾರರು ಉತ್ತರಿಸಲಿದ್ದಾರೆ ಎಂದರು.

ಶಾಮನೂರು ಶಿವಶಂಕರಪ್ಪನವರು ಜಿಲ್ಲೆಯ ಪಿತಾಮಹ. ಎಸ್.ಎಸ್. ಮಲ್ಲಿಕಾರ್ಜುನ್ ಅವರು ಅಭಿವೃದ್ಧಿಯ ಹರಿಕಾರ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸಾಕ್ಷಾತ್ ಅನ್ನಪೂರ್ಣೆಯಂತೆ ಕಾಣಿಸುತ್ತಾರೆ. ಅವರನ್ನು ನೋಡಿದರೆ ಯಾವುದೇ ರಾಜಕೀಯ ಮಾಡದೇ ಗೆಲ್ಲಿಸಬೇಕು ಎಂದೆನಿಸುತ್ತದೆ. ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಸಿದ್ದೇಶ್ವರ ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ದೂಡಾ ಮಾಜಿ ಅಧ್ಯಕ್ಷ ಎಂ.ಜಯಕುಮಾರ್, ಸೋಗಿ ಶಾಂತಕುಮಾರ್, ಕೋಳಿ ಇಬ್ರಾಹಿಂ, ಗಣೇಶ್ ಹುಲ್ಮನಿ, ಎನ್.ಎಂ.ಆಂಜನೇಯ ಗುರೂಜಿ, ಬುತ್ತಿ ಹುಸೇನ್‌ಪೀರ್, ಬಿ.ಎಚ್.ವೀರಭದ್ರಪ್ಪ, ರಾಜಾ ನಾಯಕ್, ಕಲ್ಲಿಂಗಪ್ಪ, ಸಂಗನಗೌಡ್ರು, ಎಸ್.ಎಸ್.ಗಿರೀಶ್ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!