ದಾವಣಗೆರೆ, ಏ. 14- ಮೂಲಭೂತ ಸೌಲಭ್ಯಗಳ ಬೇಡಿಕೆಗೆ ಇದುವರೆಗೂ ಯಾವ ಪಕ್ಷದ ಜನಪ್ರತಿನಿಧಿಗಳು ಸ್ಪಂದಿಸದೇ ಇರುವ ಕಾರಣ ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಗರದ ಕುಂದುವಾಡ ರಸ್ತೆಯ ಸಮೀಪದ ಮಹಾಲಕ್ಷ್ಮಿ ಬಡಾವಣೆ ನಾಗರಿಕರು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಲಕ್ಷ್ಮಿ ಬಡಾವಣೆ ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಪ್ರಸನ್ನಕುಮಾರ್ ಅವರು, ಬಡಾವಣೆ ನಿರ್ಮಾಣವಾದ ನಂತರದ ದಿನಗಳಲ್ಲಿ ನಾಗರಿಕರಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಸಮಸ್ಯೆಗಳ ಬಗ್ಗೆ ಸಚಿವರು, ಶಾಸಕರು, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ದೂಡಾ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳಾದ ಕೆ.ಪಿ. ಚಂದ್ರಶೇಖರ್, ಎಸ್. ಕುಲಕರ್ಣಿ, ಪಿ.ಬಿ. ಶಿವಕುಮಾರ್, ಮೌನೇಶ್ವರ, ರವಿಕುಮಾರ್, ಹೆಚ್. ಗುರುಮೂರ್ತಿ, ಹಿತೇಷ್ ಕುಮಾರ್ ವಿ. ಪಾಟೀಲ್, ಸಮೀವುಲ್ಲಾ, ಎಸ್.ಎಂ. ವೆಂಕಟೇಶ್, ಅಶೋಕಶೆಟ್ಟಿ, ಟಿ.ಎಂ. ಕಾಶೀನಾಥ್, ಕೆ.ಎನ್. ಮಹೇಶ್, ಕೃಷ್ಣಾಜಿ, ಚಂದ್ರಶೇಖರ್ ಮತ್ತಿತರರಿದ್ದರು.