ಸರ್ಕಾರಕ್ಕೆ ರಾಜ್ಯ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ರೇವಣಸಿದ್ದಪ್ಪ ಒತ್ತಾಯ
ಹೊನ್ನಾಳಿ,ಏ.5- ಹಲವಾರು ಪ್ರಮಾದಗಳನ್ನು ಒಳಗೊಂಡಿದ್ದ ಮೌಲ್ಯಾಂಕನ ಪರೀಕ್ಷಾ ಪದ್ಧತಿ ರದ್ದುಪಡಿಸಬೇಕು ಎಂದು ರಾಜ್ಯ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ರೇವಣಸಿದ್ದಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಶಿಕ್ಷಣ ಇಲಾಖೆ 5, 8 ಹಾಗೂ 9 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದಕ್ಕೆ ಬದಲಾಗಿ ಮೌಲ್ಯಾಂಕನ ಮಾಡುತ್ತೇವೆ ಎಂದು ಪರೀಕ್ಷೆ ನಡೆಸಿದ್ದಾರೆ. ಪಬ್ಲಿಕ್ ಪರೀಕ್ಷೆಯ ಮಾದರಿಯಲ್ಲಿಯೇ ಆಯಾ ಶಾಲೆಗಳಲ್ಲಿ ಪರೀಕ್ಷೆ ನಡೆಸಿದ್ದಾರೆ, ಅದಕ್ಕೆ ಕೊಠಡಿ ಮೇಲ್ವೀಚಾರಕರಾಗಿ ಬೇರೆ ಶಾಲೆಯ ಶಿಕ್ಷಕರನ್ನು ನೇಮಿಸಿ ಕಾರ್ಯ ನಿರ್ವಹಿಸುವಂತೆ ನೋಡಿಕೊಂಡಿದ್ದು, ಒಂದು ರೀತಿಯಲ್ಲಿ ಮಕ್ಕಳಲ್ಲಿ ಆತಂಕವನ್ನುಂಟು ಮಾಡಿದೆ ಎಂದು ದೂರಿದರು.
ರುಪ್ಸಾ ಸಂಘಟನೆ ಹಾಗೂ ಶಾಲಾ ಶಿಕ್ಷಣ ಇಲಾಖೆ ನಡುವೆ ಒಂದು ರೀತಿಯ ಕಾದಾಟ ಶುರುವಾಗಿ, ಕೋರ್ಟ್ ಮೇಟ್ಟಿಲೇರಿದ್ದು, ನಂತರ ಕೋರ್ಟ್ ಆದೇಶಕ್ಕೆ ತಲೆಬಾಗಿ ಪರೀಕ್ಷೆ ಹೇಗೋ ನಡೆಸಲಾಯಿತು. ಆದರೆ ಮೌಲ್ಯಮಾಪನ ಮಾಡಿದ ರೀತಿ ಆಶ್ಚರ್ಯವನ್ನುಂಟು ಮಾಡಿತು ಎಂದು ಹೇಳಿದರು.
ಮೌಲ್ಯಮಾಪನ ಮಾಡಿದ ಕೆಲವು ಶಿಕ್ಷಕರು, ಮಕ್ಕಳು ಸರಿಯಾದ ಉತ್ತರ ಬರೆದಿದ್ದರೂ ಅಂಕಗಳನ್ನು ಕೊಟ್ಟಿಲ್ಲ, ಆದರೆ ಕೆಲವರು ಸರಿಯಾದ ಉತ್ತರ ಬರೆಯದಿದ್ದರೂ ಅಂಕಗಳನ್ನು ಕೊಟ್ಟಿದ್ದಾರೆ ಎಂದು ದೂರಿದರು.
ಕೆಲವು ಉತ್ತರ ಪತ್ರಿಕೆಗಳಲ್ಲಿ ಅಂಕಗಳನ್ನು ಸರಿಯಾಗಿ ( ಟೋಟಲ್ ) ಕೂಡಿರುವುದಿಲ್ಲ, ಒಟ್ಟು ಅಂಕಗಳು ಎಂದು ನಮೂದಿಸಿಲ್ಲ. ಈ ರೀತಿಯಾದ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಮತ್ತು ಮರು ಎಣಿಕೆಗೆ ಯಾವುದೇ ಅವಕಾಶವಿಲ್ಲವೆಂದು ಇಲಾಖೆ ತಿಳಿಸಿದೆ. ಹಾಗಾದರೆ ಈ ರೀತಿಯ ಪರೀಕ್ಷೆ ನಡೆಸುವುದು ಶಾಲಾ ಶಿಕ್ಷಣ ಇಲಾಖೆಗೆ ಬೇಕಿತ್ತಾ. ಶಾಲೆಗಳಿಗೆ ಹಿಂತಿರುಗಿಸಿ ಕೊಟ್ಟ ಉತ್ತರ ಪತ್ರಿಕೆಗಳಲ್ಲಿ ನಮ್ಮ ಶಾಲಾ ಮಕ್ಕಳಿಗೆ ನಾವೇ ಅಂಕಗಳನ್ನು ನೀಡುವುದಾದರೆ, ಮೌಲ್ಯಮಾಪನಕ್ಕೆ ಅರ್ಥವೇನು ಎಂದು ಪ್ರಶ್ನಿಸಿದರು.
ಮೌಲ್ಯಮಾಪನ ಮಾಡಿದ ನಂತರ, ಅಂಕಗಳನ್ನು ಮೌಲ್ಯಮಾಪನ ಕೇಂದ್ರದಲ್ಲಿ ನಮೂಸಿದಿಕೊಳ್ಳಲು ಇಲಾಖೆ ಅವಕಾಶ ಮಾಡಿಕೊಟ್ಟಿಲ್ಲ.ಮೌಲ್ಯಮಾಪನವಾದ ಉತ್ತರ ಪತ್ರಿಕೆಗಳನ್ನು ಆಯಾ ಶಾಲೆಯವರೇ ತೆಗೆದುಕೊಂಡು ಹೋಗಿದ್ದಾರೆ. ನಂತರ ಶಾಲೆಯಲ್ಲಿ ಅವರವರೇ ತಿದ್ದಿಕೊಂಡರೆ ಮೌಲ್ಯಮಾಪನಕ್ಕೆ ಬೆಲೆ ಎಲ್ಲಿ ಎಂದು ಪ್ರಶ್ನಿಸಿದರು.
ಮೌಲ್ಯಮಾಪಕರಿಗೆ ಯಾವುದೇ ತರಬೇತಿ ಇರಲಿಲ್ಲ, ಪ್ರತಿ ಆರು ಜನ ಮೌಲ್ಯಮಾಪಕರಿಗೆ ಒಬ್ಬ ಡಿಸಿ ಅಂತ ನೇಮಿಸುತ್ತಿದ್ದರು. ಇಲ್ಲಿ ಅದಕ್ಕೂ ಅವಕಾಶವಿರಲಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿಯೇ 5,8, 9 ರ ಮೌಲ್ಯಮಾಪನ ಕಾರ್ಯ ಮಾಡಿದ್ದು ಸರಿಯಲ್ಲ ಎಂದು ಹೇಳಿದರು.
ಇಂತಹ ಹಲವಾರು ತಪ್ಪುಗಳಿಂದ ಕೂಡಿದ ಮೌಲ್ಯಾಂಕನದ ಅಗತ್ಯ ಇರಲಿಲ್ಲ. ಆದ್ದರಿಂದ ಈ ಪದ್ಧತಿಯನ್ನು ರಾಜ್ಯ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ ಕೂಡಲೇ ರದ್ದುಪಡಿಸಬೇಕು, ಮೊದಲೇ ಇದ್ದಂತಹ ಪರೀಕ್ಷಾ ಪದ್ಧತಿಯನ್ನೇ ಮುಂದುವರೆಸಬೇಕು ಎಂದು ಒಕ್ಕೂಟ ಆಗ್ರಹಿಸುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಎನ್.ಕೆ. ಆಂಜನೇಯ, ಕಡಗಣ್ಣಾರ ರಾಜು, ಪ್ರಧಾನ ಕಾರ್ಯದರ್ಶಿ ವರುಣಾಚಾರಿ ಉಪಸ್ಥಿತರಿದ್ದರು.