ಲೋಕಸಭಾ ಚುನಾವಣೆ
ದಾವಣಗೆರೆ ಏ.3- ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಸರಾಸರಿಗಿಂತ ಕಡಿಮೆ ಮತದಾನವಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಮತದಾನವಾಗುವಂತೆ ನೋಡಿ ಕೊಳ್ಳ ಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು, ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಶೇ. 72.96 ರಷ್ಟು ಮತದಾನವಾಗಿತ್ತು. ಆದರೆ ಅತ್ಯಂತ ಕಡಿಮೆ ಮತದಾನವಾಗಿದ್ದು, ದಾವಣಗೆರೆ ಉತ್ತರ ಶೇ. 65.71, ದಕ್ಷಿಣ ಶೇ. 65.93 ರಷ್ಟು ಇಲ್ಲಿ ಈ ಚುನಾವಣೆಯಲ್ಲಿ ಶೇ. 85 ಕ್ಕಿಂತಲೂ ಹೆಚ್ಚು ಮತದಾನವಾಗಬೇಕೆಂಬುದು ಕ್ಷೇತ್ರದ ಗುರಿಯಾಗಿದೆ ಎಂದರು.
ದಾವಣಗೆರೆ ಉತ್ತರದಲ್ಲಿ 245 ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 217 ಮತಗಟ್ಟೆಗಳಿವೆ. 2019ರ ಚುನಾವಣೆಯ ಸರಾಸರಿ ಮತದಾನಕ್ಕಿಂತಲೂ ಶೇ 20 ರಷ್ಟು ಕಡಿಮೆ 9 ಮತಗಟ್ಟೆ, ಶೇ. 15 ರಷ್ಟು ಕಡಿಮೆ 40 ಮತಗಟ್ಟೆ, ಶೇ. 10 ರಷ್ಟು ಕಡಿಮೆ 135 ಮತಗಟ್ಟೆಗಳಲ್ಲಿ ಮತದಾನವಾಗಿದೆ. ಇವು ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗಿಂತ ಕಡಿಮೆ ಮತದಾನವಾದ ಕ್ಷೇತ್ರಗಳಾಗಿವೆ.
ಉತ್ತರ ಕ್ಷೇತ್ರದಲ್ಲಿ ಕಡಿಮೆ ಮತದಾನ ಮಾಡಲಾದ 22 ಮತಗಟ್ಟೆಗಳು ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಕಡಿಮೆ ಮತದಾನವಾದ 21 ಮತಗಟ್ಟೆಗಳ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದಾಗ, ಶೇ.10 ರಿಂದ 30 ರಷ್ಟು ಮತದಾರರ ಸಂಪರ್ಕ ಸಿಕ್ಕಿಲ್ಲ ಎಂಬ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಗಳು ಅಂಕಿ-ಅಂಶದೊಂದಿಗೆ ತಿಳಿಸಿದರು. ಕೆಲವು ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಕರಾರುವಕ್ಕಾಗಿ ಸಮೀಕ್ಷೆ ನಡೆಸಿ ಬೇರೆ ಕಡೆ ವರ್ಗಾವಣೆ, ಮರಣ ಹೊಂದಿದವರ ವಿವರ ಸಂಗ್ರಹಿಸಿರುವರು ಎಂಬ ಮಾಹಿತಿ ನೀಡಿದರು.
ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರ ವಿವರ ಸಿಕ್ಕಿರುವುದಿಲ್ಲ, ಕೆಲವರು ಬಾಡಿಗೆದಾರರಾಗಿದ್ದು ಬೇರೆ ಕಡೆ ವಾಸವಾಗಿದ್ದಾರೆ. ಇನ್ನೂ ಕೆಲವು ಕಡೆ ಒಂದೇ ವಾರ್ಡ್ ವಾಸಿಯಾಗಿದ್ದರೂ ಅಕ್ಕಪಕ್ಕದ ಮತಗಟ್ಟೆಯಲ್ಲಿ ಹಂಚಿಕೆಯಾಗಿದೆ. ಪಿಎನ್‍ಟಿ ಕ್ವಾರ್ಟಸ್, ಕೆಎಸ್‍ಆರ್‍ಟಿಸಿ ವಸತಿಗೃಹ ಸೇರಿದಂತೆ, ಅನೇಕ ವಸತಿಗೃಹಗಳ ವಾಸವಿದ್ದವರ ಹೆಸರಿದೆ, ಆದರೆ ಅವರು ಇಲ್ಲಿರುವುದಿಲ್ಲ ಎಂಬ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಗಳು ನೀಡಿದರು.
ಮತದಾರರಿಗೆ ಮತದಾರ ಚೀಟಿ, ವೋಟರ್ ಗೈಡ್, ಸಂಕಲ್ಪ ಪತ್ರ ತಲುಪಿಸುವ ಕೆಲಸ ಮಾಡಬೇಕು. ಈ ಬಾರಿಯ ಚುನಾವಣೆಯಲ್ಲಿ 3 ಮತ್ತು ಅದಕ್ಕಿಂತ ಹೆಚ್ಚು ಒಂದೇ ಸ್ಥಳದಲ್ಲಿ ಮತಗಟ್ಟೆ ಇರುವ ಕೇಂದ್ರಗಳಲ್ಲಿ ಮತದಾರರ ಸಹಾಯ ಮೇಜು ಸ್ಥಾಪಿಸಲಾಗುತ್ತದೆ ಹಾಗೂ ಸ್ವಯಂ ಸೇವಕರನ್ನು ನೇಮಕ ಮಾಡಲಾಗುತ್ತದೆ. ಮತದಾರರ ಚೀಟಿಯಲ್ಲಿ ಕ್ಯೂ.ಆರ್. ಕೋಡ್ ಸಹ ನೀಡಲಾಗುತ್ತಿದ್ದು, ಆನ್ ಮಾಡಿಕೊಂಡಲ್ಲಿ ಮತಗಟ್ಟೆಗೆ ಹೋಗಬಹುದಾಗಿದೆ ಎಂದರು.
ಪಾಲಿಕೆ ಆಯುಕ್ತರಾದ ರೇಣುಕಾ ಮಾತನಾಡಿ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಮತದಾರರಿಗೂ ಮತ ಚೀಟಿ, ಮಾರ್ಗದರ್ಶಿ, ಸಂಕಲ್ಪ ಪತ್ರವನ್ನು ಎಲ್ಲಾ ಮತದಾರರಿಗೂ ತಲುಪಿಸುವ ಕೆಲಸ ಮಾಡಲಾಗುತ್ತದೆ. ಈ ಕೆಲಸಕ್ಕಾಗಿ ಎಲ್ಲಾ ಬಿಎಲ್‍ಓ ಗಳ ಜೊತೆಗೆ ಪಾಲಿಕೆ ನೀರುಗಂಟಿ, ಆರೋಗ್ಯ ನಿರೀಕ್ಷಕರು, ಕಂದಾಯ ನಿರೀಕ್ಷಕರು ಸೇರಿದಂತೆ ಎಲ್ಲಾ ಬಿಲ್ ಕಲೆಕ್ಟರ್‍ಗಳನ್ನು ಮತಗಟ್ಟೆ ಅಧಿಕಾರಿಗಳೊಂದಿಗೆ ನೇಮಿಸಲಾಗುತ್ತದೆ. ಕೆಲವು ಕಡೆ ಬಿಎಲ್‍ಓಗಳು ಸರಿಯಾಗಿ ಕೆಲಸ ಮಾಡದಿರುವುದು ಕಂಡು ಬಂದಿದ್ದು, ಅವರ ಕಾರ್ಯವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್ ಹಾಗೂ ಬಿಎಲ್‍ಓಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.