ದಾವಣಗೆರೆ, ಮಾ. 27 – ಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗೆ ನೀರು ಬಿಡಲಾಗಿದ್ದು ಕೊನೆ ಹಂತದ ರೈತರಿಗೆ ನೀರು ತಲುಪಿಸಲು ಅನಧಿಕೃತ ಪಂಪ್ಸೆಟ್ ತೆರವು ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ನಾಳೆ ದಿನಾಂಕ 28ರ ಮಧ್ಯಾಹ್ನ 2 ರವರೆಗೆ ಮಾಯಕೊಂಡ ಹೋಬಳಿ ನಲ್ಕುಂದ ಬಳಿ ತಾಲ್ಲೂಕು ಗಡಿಯಿಂದ ಕುರ್ಕಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಭದ್ರಾ ಕಾಲುವೆಗಳ ಸುತ್ತಮುತ್ತ ಬಲ ಮತ್ತು ಎಡಭಾಗದಿಂದ 200ಮೀ. ರವರೆಗಿನ ಪ್ರದೇಶದ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ತಹಶೀಲ್ದಾರ್ ಹಾಗೂ ಕಾರ್ಯ ನಿರ್ವಾಹಕ ದಂಡಾಧಿಕಾರಿ ಡಾ. ಎಂ.ಬಿ. ಅಶ್ವತ್ಥ್ ಆದೇಶಿಸಿದ್ದಾರೆ.
ಈ ಅವಧಿಯಲ್ಲಿ ಮಾರಕಾಸ್ತ್ರ, ಆಯುಧಗಳನ್ನು ತೆಗೆದುಕೊಂಡು ಹೋಗುವುದು, ಗುಂಪು ಸೇರುವುದು ಮಾಡುವಂತಿಲ್ಲ. ಯಾರಾದರೂ ಕಾನೂನು ಉಲ್ಲಂಘನೆ ಮಾಡಿದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.