ದಾವಣಗೆರೆ, ಮಾ. 27- ಸಚಿವ ಶಿವರಾಜ್ ತಂಗಡಗಿಯವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸಮರ್ಥಿಸಿಕೊಂಡಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ದೇಶದಲ್ಲಿ ಯುವಕರಿಗೆ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಹೇಳಿ ಪ್ರಧಾನಿ ಮಾತು ತಪ್ಪಿದ್ದಾರೆ. ಆದರೆ ಈಗಲೂ ಯುವಕರು, ವಿದ್ಯಾರ್ಥಿಗಳು ಜವಾಬ್ದಾರಿ ಇಲ್ಲದೆ ಮೋದಿ ಜಪ ಮಾಡುತ್ತಿದ್ದಾರೆ. ಅದಕ್ಕಾಗಿ ಅಂತವರ ಕಪಾಳಕ್ಕೆ ಹೊಡೆಯಬೇ ಕೆಂದು ಸಚಿವ ತಂಗಡಗಿ ಆಕ್ರೋಶ ಹೊರ ಹಾಕಿರುವುದರಲ್ಲಿ ತಪ್ಪಿಲ್ಲ ಎಂದರು.
ಪ್ರಧಾನಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತಾರೆ ಎಂದು ಸಿಟಿ ರವಿ ಹೇಳಿದ್ದರು. ರವಿ ಅವರು ಈ ಮೊದಲ ಚುನಾವಣೆಯಲ್ಲಿ ಘೋಷಿಸಿದ ಹಾಗೂ ಇಂದಿನ ಆಸ್ತಿ ಎಷ್ಠು ? ಭ್ರಷ್ಟಾಚಾರ ಮಾಡಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ತಯಾರಿದ್ದಾರಾ? ಎಂದು ಬಸವರಾಜ್ ಸವಾಲು ಹಾಕಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಹುಲಿಕಟ್ಟೆ ಚಂದ್ರಪ್ಪ, ಕೆ. ಎಂ. ಮಂಜುನಾಥ್, ಎಂ. ಕೆ. ಲಿಯಾಖತ್ ಅಲಿ, ಬಿ. ಹೆಚ್. ಉದಯ ಕುಮಾರ್, ಎನ್. ಎಸ್. ವೀರಭದ್ರಪ್ಪ, ಡಿ. ಶಿವಕುಮಾರ್, ಬಿ.ಎಸ್. ಸುರೇಶ್, ಮುಬಾರಕ್, ವಿನಾಯಕ ಇತರರು ಹಾಜರಿದ್ದರು.