ಲೋಕಸಭಾ ಟಿಕೆಟ್‌ನಲ್ಲಿ ಪಂಚಮಸಾಲಿಗೆ ನಿರ್ಲಕ್ಷ್ಯ

ಲೋಕಸಭಾ ಟಿಕೆಟ್‌ನಲ್ಲಿ ಪಂಚಮಸಾಲಿಗೆ ನಿರ್ಲಕ್ಷ್ಯ

ವಚನಾನಂದ ಶ್ರೀ ಅಸಮಾಧಾನ

ಹರಿಹರ, ಮಾ. 25 – ರಾಜ್ಯದ 15 ಕ್ಷೇತ್ರಗಳಲ್ಲಿ ಪಂಚಮಸಾಲಿ ಸಮುದಾಯದವರು ಹೆಚ್ಚಾಗಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಸಮಾಜದವರಿಗೆ ಹೆಚ್ಚು ಟಿಕೆಟ್ ನೀಡಿಲ್ಲ. ಈ ನಿರ್ಲಕ್ಷ್ಯ ಸರಿ ಪಡಿಸದೇ ಹೋದರೆ ರಾಜ್ಯಾದ್ಯಂತ ಸಂಚಾರ ಮಾಡಿ ಮುಂದಿನ ನಿರ್ಣಯ ತೆಗೆದುಕೊಳ್ಳುವುದಾಗಿ ಪಂಚಮಸಾಲಿ ವೀರಶೈವ ಲಿಂಗಾಯತ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.  

ನಗರದ ಹೊರವಲಯದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ದಾವಣಗೆರೆ, ಹಾವೇರಿ, ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ, ರಾಯಚೂರು, ಧಾರವಾಡ ಸೇರಿದಂತೆ 15 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸುಮಾರು 2‌ ರಿಂದ 3 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ಪಂಚಮಸಾಲಿ ಸಮಾಜದವರಿದ್ದಾರೆ. ರಾಷ್ಟ್ರೀಯ ಪಕ್ಷಗಳು ಕನಿಷ್ಠ 4 ಕಡೆಗಳಲ್ಲಿ ಪಂಚಮಸಾಲಿ ಸಮಾಜದವರಿಗೆ ಟಿಕೆಟ್ ನೀಡಬೇಕಿತ್ತು. ಆದರೆ, ಬಿಜೆಪಿಯಿಂದ 1 ಹಾಗೂ ಕಾಂಗ್ರೆಸ್‌ನಿಂದ ಎರಡು ಕಡೆ ಮಾತ್ರ ಟಿಕೆಟ್ ನೀಡಲಾಗಿದೆ. ಇನ್ನೂ ಚುನಾವಣೆಗೆ ಸಮಯ ಇದ್ದು, ಎರಡೂ ಪಕ್ಷದವರು ಟಿಕೆಟ್ ಮರು ಹಂಚಿಕೆ ಮಾಡಬೇಕು ಎಂದರು.

ಎರಡೂ ರಾಷ್ಟ್ರೀಯ ಪಕ್ಷಗಳು ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗು ಸಚಿವರ ಸ್ಥಾನಗಳನ್ನು ಸೂಕ್ತ ರೀತಿಯಲ್ಲಿ ನೀಡುತ್ತಿಲ್ಲ. ಈ ಬಗ್ಗೆ ಪಂಚಮಸಾಲಿ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುವುದು. ರಾಜಕೀಯ ಅನ್ಯಾಯ ಸರಿಪಡಿಸುವತ್ತ ಹೆಜ್ಜೆ ಇಡಲಾಗುವುದು ಎಂದು ಸ್ವಾಮೀಜಿ ಹೇಳಿದರು.

ಪಂಚಮಸಾಲಿ ಗುರುಪೀಠದ ಆಡಳಿತ ಅಧಿಕಾರಿ ಡಾ. ರಾಜಕುಮಾರ್ ಮಾತನಾಡಿ, ದೊಡ್ಡ ಸಂಖ್ಯೆಯ ಪಂಚಮಸಾಲಿ ಸಮಾಜಕ್ಕೆ ದೊಡ್ಡ ದ್ರೋಹ ಮಾಡಲಾಗಿದೆ. ಸ್ವಾಮೀಜಿಗಳ ನೇತೃತ್ವದಲ್ಲಿ ಮುಂದಿನ ನಿರ್ಣಯ ತೆಗೆದುಕೊಂಡು, ಸಮಾಜದವರಿಗೆ ಹೆಚ್ಚು ಟಿಕೆಟ್ ಕೊಡಿಸಲು ಪ್ರಯತ್ನ ಮಾಡುತ್ತೇವೆ ಎಂದರು.

ಸೋಮನಗೌಡ ಪಾಟೀಲ್ ಮಾತನಾಡಿ, ಟಿಕೆಟ್ ಕೊಡದಿದ್ದರೂ ನಮ್ಮ ಸಮಾಜದ ಮತಗಳು ಬರುತ್ತವೆ ಎಂಬ ಭ್ರಮೆ ಪಕ್ಷಗಳಿಗೆ ಇದೆ. ಈ ಬಾರಿ ನಮ್ಮ ಸಮುದಾಯದ ಜನ ಜಾಗೃತರಾಗಿದ್ದಾರೆ ಎಂದರು.

ಧರ್ಮದರ್ಶಿ ಬಿ.ಸಿ. ಉಮಾಪತಿ ಮಾತನಾಡಿ, ನಮ್ಮ ಸಮಾಜದ ಹಿರಿಯ ರಾಜಕಾರಣಿಗಳಾದ ಎಸ್.ನಿಜಲಿಂಗಪ್ಪ, ಜೆ.ಹೆಚ್.ಪಟೇಲ್ ಸೇರಿದಂತೆ ಹಲವಾರು ನಾಯಕರು ಎಲ್ಲಾ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀಯ ಮಾಡುತ್ತಾ ಬಂದಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಆ ತರಹದ ರಾಜಕಾರಣಿಗಳು ಇಲ್ಲದೇ ಸಮಸ್ಯೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸೋಮಣ್ಣ ಬೇವಿನಮರದ, ಹೆಚ್.ಎಸ್.ನಾಗರಾಜ್, ಪ್ರಕಾಶ್ ಪಾಟೀಲ್, ಗುತ್ತೂರು ಹಾಲೇಶಗೌಡ್ರು, ಜ್ಯೋತಿ ಪ್ರಕಾಶ್, ಪಿ.ಡಿ.ಶಿರೂರು, ಚಂದ್ರಶೇಖರ್ ಪೂಜಾರ್, ಪರಮೇಶ್ವರ ಪಟ್ಟಣ್ಣಶೆಟ್ಟಿ, ಶಂಕರ್ ಗೌಡ, ವಸಂತ್ ಹುಲ್ಕತ್ತಿ, ರಶ್ಮಿ ಕುಂಕದ್, ಪ್ರಭಾ ಮುರುಗೇಶ ನುಚ್ಚಿನ್, ದಾವಣಗೆರೆ, ನಾಗರತ್ನ ನಾಗರಾಜ್ ನುಚ್ಚಿನ್ ನ್ಯಾಮತಿ, ಕವಿತಾ ಬಳೆಗಾರ ನ್ಯಾಮತಿ, ಅನುಪಮ, ನಾಗವೇಣಿ. ಚಂದ್ರು ಹೊನ್ನಾಳಿ, ದಿಟೂರು ನಿರಂಜನ್, ಕೊಟ್ರೇಶ್ ಪೂಜಾರ್ ಹೊಸಪೇಟೆ, ಗಂಗನಹರಸಿ ಉಮೇಶ್, ಹನಗವಾಡಿ ವೀರೇಶ್ ಪೂಜಾರ್, ಬಂಕಪುರ ಶಿವಣ್ಣ , ಲಿಂಗರಾಜ್ ಪಾಟೀಲ್ ಬೆಳಕೇರಿ, ಅಶೋಕ ಬೆಂಡಿಗೇರಿ. ಶ್ರೀಶೈಲ ಮತ್ತಿತರರು ಉಪಸ್ಥಿತರಿದ್ದರು.

error: Content is protected !!