ಬಸವಾದಿ ಶರಣರ ದಾಸೋಹ ಧರ್ಮ ಸಮಾನತೆಯ ಸಂಕೇತ

ಬಸವಾದಿ ಶರಣರ ದಾಸೋಹ ಧರ್ಮ ಸಮಾನತೆಯ ಸಂಕೇತ

ದೊಣೆಹಳ್ಳಿ ಶರಣ ಬಸವೇಶ್ವರ ದಾಸೋಹ ಮಠದಲ್ಲಿನ ದಾಸೋಹ ಸಂಸ್ಕೃತಿ ಉತ್ಸವದಲ್ಲಿ ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜನಪ್ಪ

ಜಗಳೂರು, ಮಾ. 25- ಬಸವಾದಿ ಶರಣರ ದಾಸೋಹ ಧರ್ಮ ಸಮಾನತೆಯ ಸಂಕೇತ. ಇದು ಮಾನವೀಯ ಸಮಾಜದ ಹೃದಯವಂತಿಕೆ. ಇಂತಹ ತತ್ವವನ್ನು ಜಗತ್ತಿಗೇ ಸಾರಿದವರು, ಜಾಗತಿಕವಾಗಿ ಅಗ್ರಪಂಕ್ತಿಯಲ್ಲಿದ್ದಾರೆ ಎಂದು ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜನಪ್ಪ ಹೇಳಿದರು.

ಜಗಳೂರು ತಾಲ್ಲೂಕು ದೊಣೆಹಳ್ಳಿಯ ಶ್ರೀ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ಇಂದು ದಾಸೋಹ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿವಶರಣರ ತಾತ್ವಿಕ ಬದ್ಧತೆಯನ್ನು ಹೊಂದಿರುವ ದೊಣೆಹಳ್ಳಿಯ ಶರಣರ ಮಠ ಸಾಮಾಜಿಕವಾಗಿ ಹೊಸ ಹೆಜ್ಜೆ ಇಟ್ಟಿರುವುದು ಅತ್ಯಂತ ಅಭಿನಂದನೀಯ ಕ್ರಮ ಎಂದರು.

ಹೊಸಮಠ, ಹೊಸ ಮಹಾದ್ವಾರ, ಹೊಸ ದಾಸೋಹ ಭವನದ ನಿರ್ಮಾಣದ ಜೊತೆಗೆ ಹಲವು ಆಯಾಮಗಳ ದಾಸೋಹ ಸಂಸ್ಕೃತಿಗೆ ಮುಂದಾಗಿರುವುದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇದೊಂದು ದೊಡ್ಡ ಬುನಾದಿ. ಅನ್ನ, ಅಕ್ಷರ, ಅರಿವು, ಆರೋಗ್ಯದಂತಹ ದಾಸೋಹ ಚಿಂತನೆಯೇ ವಿಶಿಷ್ಟವಾದುದು ಎಂದು ಹರ್ಷ ವ್ಯಕ್ತಪಡಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳ ಮಠದ ಶ್ರೀ ಮಲ್ಲಿಕಾರ್ಜುನ ದೇವರು ಆಶೀರ್ವಚನ ನೀಡಿ, ಈ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕ ಕಳೆದಿದ್ದರೂ ಜನತೆಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ , ಸಮಾನತೆ ಸಿಕ್ಕಿಲ್ಲ. ಇದು ಸಾಧ್ಯವಾಗಬೇಕೆಂದರೆ ಬಸವ ತತ್ವದ ಅನುಷ್ಠಾನವೇ ಎಲ್ಲಾ ಸಮಸ್ಯೆಗಳಿಗೆ ಸಿದ್ಧಔಷಧ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಜಾತಿ, ಧರ್ಮದ ಸಂಕುಚಿತ ಸಂಕೋಲೆಯಲ್ಲಿ ಸಿಲುಕಿರುವ ಜನರು ಮುಕ್ತ ಸ್ವಾತಂತ್ರ್ಯದ, ಸಾಮರಸ್ಯದ ಜೀವನ ಸಾಧ್ಯವಾಗಬೇಕೆಂದರೆ ಶರಣ ಧರ್ಮವನ್ನು ಒಪ್ಪಿಕೊಂಡು-ಅಪ್ಪಿಕೊಳ್ಳಬೇಕೆಂದರು.

ಸಮಾರಂಭದ ಉದ್ಘಾಟನೆಗೂ ಮುನ್ನ ಚಂಗಡಿಹಳ್ಳಿ ಮಠದ ಶ್ರೀ ಬಸವ ಮಹಾಂತಲಿಂಗ ಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹೆಚ್.ಎನ್. ತಿಪ್ಪೇಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಿತ್ರದುರ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಸಾಹಿತಿ ಎನ್.ಟಿ. ಯರ್ರಿಸ್ವಾಮಿ, ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಬಿ.ಎನ್. ಶಿವನಗೌಡ್ರು, ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಲಿಂಗಣ್ಣನಹಳ್ಳಿ ಸುಜಾತಮ್ಮ, ಗ್ರಾಮದ ಹಿರಿಯ ಮುಖಂಡರಾದ ಜಿ. ಬಸವರಾಜಪ್ಪ, ಹೆಚ್.ಹನುಮಂತರೆಡ್ಡಿ, ದೊಣೆಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ, ಚಿತ್ರದುರ್ಗ ವೀರಶೈವ ಸಮಾಜದ ಅಧ್ಯಕ್ಷ ಎಸ್. ಷಣ್ಮುಖಪ್ಪ ಮಾತನಾಡಿದರು.

ಉತ್ಸವದ ಮುಖ್ಯ ಸಂಚಾಲಕರೂ ಆಗಿರುವ ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನಾಮಡುಗು ದಾಸೋಹ ಮಠದ ಧರ್ಮಾಧಿಕಾರಿ ಐಮುಡಿ ಶರಣಾರ್ಯರು ಸ್ವಾಗತಿಸಿದರು. ಸಮಾರಂಭಕ್ಕೂ ಮುನ್ನ ಊರಿನ ಗ್ರಾಮಸ್ಥರು ವಿವಿಧ ಭಾಗಗಳಿಂದ ಆಗಮಿಸಿದ್ದ ಗಣ್ಯರ ಸಮ್ಮುಖದಲ್ಲಿ ಐದು ದಿನದ ಅನ್ನ ದಾಸೋಹಕ್ಕೆ ಚಾಲನೆ ನೀಡಿದರು. 

error: Content is protected !!