ಎಸ್ಸೆಸ್ಸೆಲ್ಸಿ : ಹೊನ್ನಾಳಿ ತಾ.ನಲ್ಲಿ 11 ಪರೀಕ್ಷಾ ಕೇಂದ್ರ

ಹೊನ್ನಾಳಿ, ಮಾ. 24 – ನಾಳೆ ದಿನಾಂಕ 25ರಿಂದ ಏಪ್ರಿಲ್ 6ರವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಿಇಒ ನಂಜರಾಜ್ ತಿಳಿಸಿದ್ದಾರೆ.

3 ಪರೀಕ್ಷಾ ಕೇಂದ್ರಗಳನ್ನು ನಗರ ಪ್ರದೇಶಗಳಲ್ಲಿ, 8 ಪರೀಕ್ಷಾ ಕೇಂದ್ರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೇರಿದಂತೆ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಸಕಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದ್ದು, ಸರ್ಕಾರಿ ಪ್ರೌಢಶಾಲೆ ಗಳಲ್ಲಿ 7, ಅನುದಾನಿತ ಪ್ರೌಢಶಾಲೆಗಳಲ್ಲಿ 4 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದ್ದು, ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ 3191 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದು 149 ಸುವ್ಯವಸ್ಥಿತವಾದ ಕೊಠಡಿಗಳು ಹಾಗೂ ಪೀಠೋಪಕರಣದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದರು.

ಪರೀಕ್ಷಾ ಕಾರ್ಯವು ಸುಗಮವಾಗಿ ನಡೆಯಲು ಪ್ರತೀ ಕೇಂದ್ರಕ್ಕೆ ತಲಾ 1 ಪೊಲೀಸ್ ಮತ್ತು ಹೋಂ ಗಾರ್ಡ್ ಹಾಗೂ ಒಟ್ಟು 22 ಜನ ಸಿಬ್ಬಂದಿಯವರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ 11 ಜನ ಆಶಾ ಕಾರ್ಯಕರ್ತೆಯರು 11 ಜನ ಆರೋಗ್ಯ ಸಿಬ್ಬಂದಿಯವರನ್ನು ನೇಮಕ ಮಾಡಲಾಗಿದೆ. 138 ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳಲಾಗಿದ್ದು, 11 ಜನ ಸ್ಥಾನಿಕ ಜಾಗೃತ ದಳವನ್ನು 5 ಜನ ಮಾರ್ಗಾಧಿಕಾರಿಗಳನ್ನು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಸಂಚಾರಿ ಜಾಗೃತಿ ದಳದ ತಂಡಕ್ಕೆ ನೇಮಕ ಮಾಡಲಾಗಿದೆ, 5 ಇಲಾಖಾ ವಾಹನಗಳಲ್ಲಿ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳನ್ನು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಗೈರು ಹಾಜರಿ ಹಾಗೂ ಸ್ವೀಕೃತಿ ಕೇಂದ್ರಗಳ ನಿರ್ವಹಣೆಗಾಗಿ ಶಿಕ್ಷಣ ಸಂಯೋಜಕರಾಗಿ ಎಸ್.ಎಚ್.ಬಸವರಾಜ್ ಇವರನ್ನು ನೇಮಕ ಮಾಡಲಾಗಿದ್ದು ಸಹಾಯವಾಣಿ 9743875176 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

error: Content is protected !!