ವಿಪಕ್ಷ ನಾಯಕರದ್ದು ರಾಜಕೀಯ ಪ್ರೇರಿತ ಹೇಳಿಕೆ
ದಾವಣಗೆರೆ, ಮಾ. 22- ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಬಿಜೆಪಿಯವರು ಜನರಿಗೆ ಸುಳ್ಳು ಮಾಹಿತಿ ನೀಡಿ ಬರಗಾಲದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದು ಪಾಲಿಕೆ ಸದಸ್ಯ ಎ.ನಾಗರಾಜ್ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್ ಅವರದ್ದು ರಾಜಕೀಯ ಪ್ರೇರಿತ ಹೇಳಿಕೆಯಾಗಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ದುರ್ಗಾಂಬಿಕಾ ಜಾತ್ರೆ ವೇಳೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಪ್ಲಾನ್ ಮಾಡಿ ಕ್ರಮ ವಹಿಸಿದ್ದೇವೆ. ಜಾತ್ರೆ ನಡೆಯುವ ಪ್ರದೇಶಗಳಾದ ನಗರದ ಹಳೇ ಭಾಗದಲ್ಲಿ ಸೋಮವಾರದಿಂದ ಬುಧವಾರದವರೆಗೆ ನೀರು ಕೊಟ್ಟಿದ್ದೇವೆ ಎಂದರು.
ನಗರದಲ್ಲಿ ಪ್ರಸ್ತುತ 1110 ಚಾಲ್ತಿಯಲ್ಲಿರುವ ಬೋರ್‌ವೆಲ್‌ಗಳಿವೆ. ಅವುಗಳಿಂದಲೂ ನಗರದ ಜನತೆಗೆ ನೀರು ಕೊಡಲಾಗುತ್ತಿದೆ. ನೀತಿ ಸಂಹಿತೆ ಜಾರಿಗೆ ಮುನ್ನವೇ ಸಚಿವ ಮಲ್ಲಿಕಾರ್ಜುನ್ ಅವರು ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಜಿಲ್ಲಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ 40 ಬೋರ್‌ಗಳನ್ನು ರಿಬೋರ್ ಮಾಡಲೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದರು.
ಶುಕ್ರವಾರ ಬೆಳಿಗ್ಗೆ ಟಿವಿ ಸ್ಟೇಷನ್ ಕೆರೆಗೆ ಭದ್ರಾ ನಾಲಾ ನೀರು ಹರಿದು ಬರುತ್ತಿದ್ದು, ಕೆರೆ ತುಂಬಿಸಿಕೊಳ್ಳಲಾಗುತ್ತಿದೆ. 8ರಿಂದ 10 ದಿನಗಳಿಗೊಮ್ಮೆ ನೀರು ಪೂರೈಕೆಗೆ ತೊಂದರೆ ಇಲ್ಲ. ಮಹಾನಗರ ಪಾಲಿಕೆಯ 3 ಹಾಗೂ 7 ಖಾಸಗಿ ಟ್ಯಾಂಕರ್‌ಗಳಿಂದ ಅವಶ್ಯವಿದ್ದ ಕಡೆ ನೀರು ಪೂರೈಕೆಗೆ ಕ್ರಮ ವಹಿಸಲಾಗಿದೆ. ರಾಜ್ಯಾದ್ಯಂತ ಬರವಿದ್ದರೂ ದಾವಣಗೆರೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ ಎಂದು ನಾಗರಾಜ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮೇಯರ್ ಬಿ.ಹೆಚ್. ವಿನಾಯಕ್, ಸದಸ್ಯರಾದ ಅಬ್ದುಲ್ ಲತೀಫ್, ಗಡಿಗುಡಾಳ್ ಮಂಜುನಾಥ್, ಮುಖಂಡ ವೆಂಕಟೇಶ್ ಇದ್ದರು.