ಬಲವಂತವಾಗಿ ಬಣ್ಣ ಎರಚಿದರೆ ಕ್ರಮ: ಎಸ್ಪಿ ಎಚ್ಚರಿಕೆ
ದಾವಣಗೆರೆ, ಮಾ.22- ಜಿಲ್ಲೆಯಾದ್ಯಂತ ಇದೇ ಮಾ.24 ರಂದು ಕಾಮದಹನ ಹಾಗೂ 25 ರಂದು ಹೋಳಿ ಹಬ್ಬ ಆಚರಣೆ ಇದ್ದು, ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಮನವಿ ಮಾಡಿದ್ದಾರೆ.
ಯಾವುದೇ ವ್ಯಕ್ತಿಯ ಮೇಲೆ ಒತ್ತಾಯ ಪೂರ್ವಕವಾಗಿ ಬಣ್ಣ ಎರಚಬಾರದು. ಪರೀಕ್ಷೆಗ ಹಾಜರಾಗುವ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚಿದರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಸಿದ್ದಾರೆ.
ಅಪಾಯಕಾರಿ ರಾಸಾಯನಿಕ ಮಿಶ್ರಿತ ಬಣ್ಣ ಎರಚುವಂತಿಲ್ಲ. ಸಾರ್ವಜನಿಕ ನೀರು ಸರಬರಾಜು ಸ್ಥಳಗಳಲ್ಲಿ ಬಣ್ಣ ತೊಳೆದು ನೀರನ್ನು ಮಲಿನ ಮಾಡಬಾರದು.
ಮೆಡಿಕಲ್ ಮತ್ತು ಇಂಜಿನಿಯರ್ ವಿದ್ಯಾರ್ಥಿಗಳು ಒಂದು ವಿದ್ಯಾರ್ಥಿ ನಿಲಯದಿಂದ ಇನ್ನೊಂದು ವಿದ್ಯಾರ್ಥಿ ನಿಲಯಕ್ಕೆ ಹೋಗಿ ಬಣ್ಣ ಎರಚುವುದಾಗಲೀ ಅಥವಾ ಮಹಿಳಾ ವಿದ್ಯಾರ್ಥಿ ನಿಲಯಗಳ ಬಳಿ ತೆರಳಿ ಮಹಿಳಾ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚುವುದನ್ನು ನಿಷೇಧಿಸಲಾಗಿದೆ.
ಬಣ್ಣ ಹಚ್ಚುವ ಸಮಯದ ಕೊನೆಯ ಹಂತದಲ್ಲಿ ಕೆಲವು ಕಿಡಿಗೇಡಿಗಳು ಮೈ ಮೇಲಿನ ಬಟ್ಟೆಗಳನ್ನು ಹರಿದು ಸಾರ್ವಜನಿಕವಾಗಿ ಅಸಹ್ಯವಾಗುವ ರೀತಿಯಲ್ಲಿ ನೃತ್ಯ ಮಾಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದು.
ಧಾರ್ಮಿಕ ಕಟ್ಟಡಗಳಾದ ಚರ್ಚು, ಮಸೀದಿ, ದರ್ಗಾ ಮತ್ತು ದೇವಾ ಲಯಗಳಿಗೆ ಬಣ್ಣ ಎರಚವಂತಿಲ್ಲ. ಕಾಮದಹನವನ್ನು ಹಾಗೂ ಹೋಳಿ ಹಬ್ಬವನ್ನು ನಿಗದಿತ ಸಮಯಕ್ಕೆ ಮುಕ್ತಾಯ ಮಾಡಬೇಕು, ಸುಳ್ಳು ಸುದ್ದಿ-ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟರೆ, ಕ್ರಮ ವಹಿಸುವುದಾಗಿ ಎಸ್ಪಿ ಎಚ್ಚರಿಸಿದ್ದಾರೆ.