ಕಾರ್ಯಕರ್ತರ ಸಭೆಯಲ್ಲಿ ಜಿ.ಬಿ. ವಿನಯ್ಕುಮಾರ್
ದಾವಣಗೆರೆ, ಮಾ. 21- ಶೀಘ್ರದಲ್ಲಿಯೇ ಲೋಕಸಭಾ ವ್ಯಾಪ್ತಿಯಲ್ಲಿ ಪ್ರತಿ ನಿತ್ಯ ಇಪ್ಪತ್ತು ಹಳ್ಳಿಗಳಿಗೆ ಭೇಟಿ ನೀಡಿ, ಅಲ್ಲಿನ ಜನಾಭಿಪ್ರಾಯ ಸಂಗ್ರಹಣೆ ಮಾಡಿ, ಇನ್ನು ಹದಿನೈದು ದಿನಗಳಲ್ಲಿ ರಾಜಕೀಯದ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಔಟ್ರೀಚ್ ವಿಭಾಗದ ಕರ್ನಾಟಕ ಉಪಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ತಿಳಿಸಿದರು.
ನಗರದ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಇಂದು ಏರ್ಪಾಡಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಪ್ರಬಲ ಅಕಾಂಕ್ಷಿಯಾಗಿದ್ದ ಎಐಸಿಸಿಇಸಿ ಸಭೆಯಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಕೊನೆಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದ್ದು ಬೇಸರ ಮೂಡಿಸಿದೆ. ಆದರೂ ನಾನು ಅಳುವ ವ್ಯಕ್ತಿಯಂತೂ ಅಲ್ಲ. ಸಾಮಾಜಿಕ ನ್ಯಾಯಕ್ಕೆ ಅನ್ಯಾಯವಾಗಿದೆ ಎಂದರು. ಗ್ರಾಮಗಳನ್ನು ಸುತ್ತಿದ ಬಳಿಕ ಬಂಡಾಯವೋ, ಪಕ್ಷೇತರ ಅಭ್ಯರ್ಥಿಯಾಗಬೇಕೆಂಬ ಬಗ್ಗೆ ಜನರ ಅಭಿಪ್ರಾಯದ ಮೇರೆಗೆ ನಿರ್ಧಾರ ಕೈಗೊಳ್ಳಲಾಗುವುದು. ನನಗೆ ಅವಕಾಶ ಸಿಕ್ಕರೆ ಮಾದರಿ ಸಂಸದನಾಗಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಲೋಕಸಭಾ ವ್ಯಾಪ್ತಿಯ ಕಾರ್ಯಕರ್ತರು, ಅಭಿಮಾನಿಗಳಿಂದ ಒತ್ತಡ ಬರುತ್ತಿದೆ. ಆದರೂ ಯೋಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದ ಅವರು, ಈಗಾಗಲೇ ಪಾದಯಾತ್ರೆ ಮೂಲಕ ಹಾಗೂ ವಾಹನಗಳ ಮೂಲಕ ಲೋಕಸಭಾ ವ್ಯಾಪ್ತಿಯ ಬಹುತೇಕ ಹಳ್ಳಿಗಳನ್ನು ಸುತ್ತಿ ಬಂದಿದ್ದೇನೆ. ಉತ್ತಮ ಪ್ರತಿಕ್ರಿಯೆ ಕೂಡ ನನಗೆ ದೊರೆತಿದೆ ಎಂದು ತಿಳಿಸಿದರು.
ಏಪ್ರಿಲ್ 12 ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ವಿನಯ್ ಕುಮಾರ್ ಅವರೇ ಏಕೆ ಬೇಕು ಎಂಬ ಜನರ ಆಶಯವನ್ನು ವರಿಷ್ಠರಿಗೆ ಮನದಟ್ಟು ಮಾಡುತ್ತೇನೆ. ಸಾಮಾಜಿಕ ನ್ಯಾಯದಡಿಯಲ್ಲಿ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಎಂದಿನಂತೆ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಜನಸೇವಕನಾಗಿ ಕೆಲಸ ಮಾಡುತ್ತೇನೆ ಎಂದರು.
ನನಗೇ ಟಿಕೆಟ್ ನೀಡಿದ್ದಿದ್ದರೆ ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸ ನನ್ನದಾಗಿತ್ತು. ಒಂದು ಲೋಕಸಭಾ ಸದಸ್ಯ ಸ್ಥಾನವನ್ನು ವಂಚಿಸಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಯಾವುದ ರಾಜಕೀಯದ ಹಿನ್ನೆಲೆಯಿಲ್ಲದ ಸಾಮಾನ್ಯ ಕುಟುಂಬದಿಂದ ಬಂದ ನನಗೆ ಅಲ್ಪ ಕಾಲದಲ್ಲಿ ದಾವಣಗೆರೆ ಜಿಲ್ಲೆಯ ಜನತೆ ಅಪಾರ ಪ್ರೀತಿ-ವಿಶ್ವಾಸ ತೋರಿ ನನ್ನನ್ನು ಆಶೀರ್ವದಿಸಿದ್ದಾರೆ. ಅವರ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ಜಾತ್ಯತೀತವಾಗಿ ಎಲ್ಲರ ವಿಶ್ವಾಸಗಳಿಸಿದ್ದೇನೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯ ಸತ್ತು ಹೋಗಿತ್ತು. ಅದಕ್ಕೆ ಮರುಜೀವ ಕೊಡಲು ಮುಂದಾಗಿದ್ದೆ. ಜನಸಾಮಾನ್ಯರ ಕನಸನ್ನು ನನಸು ಮಾಡಲು ಮತ್ತು ಶೈಕ್ಷಣಿಕವಾಗಿ ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಗುರಿ ಹೊಂದಿದ್ದೆ. ಕೇವಲ ಅರ್ಧ ಗಂಟೆಯ ಅವಧಿಯಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದ ನನ್ನ ಹೆಸರನ್ನು ಕೈಬಿಡಲಾಯಿತು. ಮೌಂಟ್ ಎವರೆಸ್ಟ್ ಪರ್ವತ ಏರಿ ಇನ್ನೇನು ಬಾವುಟ ನೆಡಬೇಕು ಎನ್ನುವಷ್ಟರಲ್ಲಿ ಅಲ್ಲಿಂದ ಜಾಡಿಸಿ ಒದ್ದಂತೆ ಬಾಸವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.