ಬಾಪೂಜಿ ಮಕ್ಕಳ ಅಸ್ಪತ್ರೆ ವಿವೇಕ ಪೋಷಕರ ವೇದಿಕೆ ಕಾರ್ಯಕ್ರಮದಲ್ಲಿ ಡಾ.ಎಂ.ಎಸ್.ಅನುರೂಪ ಸಲಹೆ
ದಾವಣಗೆರೆ,ಮಾ.21- ಹೆಚ್ಚು ಜನರು ಒಂದೆಡೆ ಸೇರುವ ಜಾತ್ರೆಗಳ ಸಂದರ್ಭದಲ್ಲಿಯೇ ಸಾಂಕ್ರಾಮಿಕ ರೋಗಗಳು ಹೆಚ್ಚಿನದಾಗಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಜನತೆ ಈ ಬಗ್ಗೆ ಜಾಗೃತಿ ವಹಿಸಬೇಕು ಎಂದು ಜೆಜೆಎಂಎಂಸಿ ಪ್ರಾಧ್ಯಾಪಕರು ಹಾಗೂ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರೂ ಆದ ಡಾ.ಎಂ.ಎಸ್.ಅನುರೂಪ ಸಲಹೆ ನೀಡಿದರು.
ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ವಿವೇಕ ಪೋಷಕರ ಆರೋಗ್ಯ ವೇದಿಕೆ ಕಾರ್ಯಕ್ರಮದಲ್ಲಿ `ಎಲ್ಲೆಲ್ಲೂ ಜಾತ್ರೆ ಸಂಭ್ರಮಾ ಚರಣೆ, ಹೆಚ್ಚುತ್ತಿರುವ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಅರಿವಿರಲಿ’ ಎಂಬ ವಿಚಾರವಾಗಿ ಅವರು ಮಾತನಾಡಿದರು.
ಜಾತ್ರೆಗಳಲ್ಲಿ ಅತಿಯಾದ ಜನಸಾಂದ್ರತೆಯಿಂದಾಗಿ ಕುಡಿಯುವ ನೀರು, ಸೇವಿಸುವ ಆಹಾರ ಮತ್ತು ಉಸಿ ರಾಡುವ ಗಾಳಿಯೂ ರೋಗಾಣುಗಳಿಂದ ಕಲುಷಿತ ಗೊಂಡು ರೋಗಗಳು ಹರಡಲು ಕಾರಣವಾಗುತ್ತದೆ.
ಜಠರ ಮತ್ತು ಕರುಳಿನ ಸೋಂಕುಗಳಿಂದ ಅತಿಸಾರ, ಪೋಲಿಯೋ, ಕಾಲರ, ಹೆಪಟೈಟಿಸ್, ಟೈಫಾಯ್ಡ್ ರೋಗಗಳು, ಬ್ಯಾಕ್ಟೀರಿಯಾ ವೈರಸ್ಗಳು ಉಂಟಾಗುತ್ತವೆ. ಇವು ಕಲುಷಿತ ನೀರು ಆಹಾರ ಮತ್ತು ನೀರಿನಿಂದ ಹರಡುತ್ತವೆ ಹಾಗಾಗಿ ಬೇಧಿ, ವಾಂತಿ ಮತ್ತು ಜ್ವರ ಲಕ್ಷಣಗಳು ಕಾಣಿಸುತ್ತವೆ.
ಜಾತ್ರೆಯಲ್ಲಿ ಸಂತೋಷ ಸಂಭ್ರಮ ಇರುತ್ತೆ ನಿಜ, ಆದರೆ, ಸೋಂಕಿತ ವ್ಯಕ್ತಿಗಳು ಕೆಮ್ಮಿದಾಗ, ಸೀನಿದಾಗ ರೋಗಾಣುಗಳು ಗಾಳಿಯ ಮೂಲಕ ಇತರ ವ್ಯಕ್ತಿಗಳ ಶ್ವಾಸಕೋಶಕ್ಕೆ ಬಹುಬೇಗ ಹರಡುತ್ತವೆ. ಆ ಸಂಭ್ರಮ ನಂತರ ಇಲ್ಲವಾಗುತ್ತದೆ. ಈ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಹೆಪಟೈಟಿಸ್, ಟೈಫಾಯ್ಡ್, ದಢಾರ ರೋಗಗಳ ವಿರುದ್ದದ ಲಸಿಕೆಗಳನ್ನು ಜಾತ್ರೆಗಳು ಪ್ರಾರಂಭವಾಗುವ ಮುನ್ನವೇ ಹಾಕಿಸಿಕೊಳ್ಳಬೇಕಾಗುತ್ತದೆ.
ಜಾತ್ರೆಯಲ್ಲಿ ಮಾರಲ್ಪಡುವ ಐಸ್, ಕಬ್ಬಿನಹಾಲು, ಜ್ಯೂಸ್ ಇತ್ಯಾದಿ ಕುಡಿಯಬಾರದು, ತೆರದಿಟ್ಟ ಆಹಾರ ಪದಾರ್ಥ ಸೇವಿಸಬಾರದು. ನೊಣ ಮತ್ತು ಸೊಳ್ಳೆಗಳಿಂದ ಅನೇಕ ಕಾಯಿಲೆಗಳು ಹರಡುವ ಸಾಧ್ಯತೆ ಇರುತ್ತದೆ. ಸುರಕ್ಷಿತ ಆಹಾರ ಮತ್ತು ಶುದ್ಧ ನೀರನ್ನು ಬಳಸಬೇಕು. ಮಾಂಸ ಮತ್ತು ಎಲ್ಲ ಪದಾರ್ಥಗಳನ್ನು ಸರಿಯಾಗಿ ಬೇಯಿಸಬೇಕು. ಹಸಿ ಹಣ್ಣು ಮತ್ತು ತರಕಾರಿ ಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಬೇಕು. ಆಹಾರ ಪದಾರ್ಥಗಳನ್ನು ನೊಣಗಳಿಂದ ಸಂರಕ್ಷಿಸಬೇಕು ಜಾತ್ರೆ ಯಲ್ಲಿ ಮಾಡುವ ಮೀನು, ಮಟನ್ ಸಾರನ್ನು 24 ಗಂಟೆಯ ನಂತರ ತಿನ್ನಬಾರದು. ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ ತೊಳೆದುಕೊಳ್ಳಬೇಕು. ಶ್ವಾಸಕೋಶ ಸೋಂಕುಗಳಿಂದ ರಕ್ಷಿಸಿಕೊಳ್ಳಲು ಮಾಸ್ಕ ಧರಿಸಬೇಕು.
ಕೆಮ್ಮು, ಶೀತ ಇರುವ ಜನರು ಜಾತ್ರೆಗಳಿಗೆ ಹೋಗಬಾರದು ಅಲ್ಲದೇ ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳೂ ಸಹ ಜಾತ್ರೆಗಳಲ್ಲಿ ಭಾಗವಹಿಸಬಾರದು ಎಂಬ ಸಲಹೆಯನ್ನು ಡಾ.ಅನೂರೂಪ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಸಿಎಚ್ಐ ಅಂಡ್ ಆರ್ಸಿ ನಿರ್ದೇಶಕ ಡಾ.ಜಿ.ಗುರುಪ್ರಸಾದ್, ಬೇಸಿಗೆಯಲ್ಲಿ ವಾಂತಿ, ಬೇಧಿ, ಡೆಂಗ್ಯೂ ಇತ್ಯಾದಿ ಸಾಂಕ್ರಾಮಿಕ ಕಾಯಿಲೆಗಳು ಜಾಸ್ತಿ ಆಗುತ್ತವೆ. ಹಾಗಾಗಿ ಶುದ್ಧ ನೀರು, ಶುದ್ಧ ಆಹಾರ, ಸ್ವಚ್ಛತೆ ಬಗ್ಗೆ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ಡಾ. ಕೌಜಲಗಿ, ಡಾ.ಬಸಂತ್ಕುಮಾರ್, ವ್ಯವಸ್ಥಾಪಕ ಎಸ್.ಎನ್.ಗುಬ್ಬಿ, ಸಂಯೋಜಕಿ ಸಿ.ಎಂ.ಅಂಜಲಿ ಮತ್ತಿತರರು ಹಾಜರಿದ್ದರು.