ಬೆಂಗಳೂರಿನ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಏಪ್ರಿಲ್ 15ರಂದು ದ.ಸಂ. ಸಮಿತಿಯ 50ನೇ ಸುವರ್ಣ ಮಹೋತ್ಸವದ ಐತಿಹಾಸಿಕ ಸಮಾವೇಶ ನಡೆಯಲಿದೆ. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಜಯಂತ್ಯುತ್ಸವದ ಅಂಗವಾಗಿ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ದಾವಣಗೆರೆ, ಮಾ.20- ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಬಿ) (ಆರ್ಪಿಐಬಿ) ಪಕ್ಷವು ದೇಶದ ಹಲವು ರಾಜ್ಯದಲ್ಲಿ ಸ್ಪರ್ಧಿಸುವ ಜತೆಗೆ ರಾಜ್ಯದ 28 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ. ಎನ್. ಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಚುನಾವಣಾ ತಯಾರಿ ನಡೆಸಿರುವ ಪಕ್ಷವು, ಕೆಲವೇ ದಿನಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಹೇಳಿದರು.
ರಾಜ್ಯದ 28 ಕ್ಷೇತ್ರದಲ್ಲೂ `ಭೀಮಜಾಥಾ’ ತಂಡ ಪ್ರವಾಸದ ಜತೆಗೆ ಸಂವಿಧಾನ ಜಾರಿ ಜನಾಂದೋಲನ ಮಾಡುತ್ತಿದೆ. ಮಾ.18ರಿಂದಲೇ ಪ್ರವಾಸ ಪ್ರಾರಂಭವಾಗಿದ್ದು, ಮಾ.21 ರಂದು ಗದಗ, 22ಕ್ಕೆ ಕೊಪ್ಪಳ, 23ಕ್ಕೆ ಬಾಗಲಕೋಟೆ, 24ಕ್ಕೆ ಬಿಜಾಪುರ, 25ಕ್ಕೆ ಕಲಬುರ್ಗಿ, 26ಕ್ಕೆ ಯಾದಗಿರಿ, 27ಕ್ಕೆ ರಾಯಚೂರು, 28ಕ್ಕೆ ಬಳ್ಳಾರಿ, 29ಕ್ಕೆ ಬೆಳಗಾವಿ ಮತ್ತು ಏಪ್ರಿಲ್ 1ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ದೇಶದಲ್ಲಿ ದೀರ್ಘಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ, ಸಂವಿಧಾನದ ಆಶಯ ಜಾರಿ ಮಾಡದೇ ಎರಡು ಪಕ್ಷದ ಆಡಳಿತದಲ್ಲೂ ಕೋಮುವಾದ, ತೀವ್ರ ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಯಿಂದ ದೇಶ ಬೆಂದಿದೆ ಎಂದು ದೂರಿದರು.
ಎಸ್ಸಿ-ಎಸ್ಟಿ ಸೇರಿದ 11,144 ಕೋಟಿ ಹಣ ಪಂಚ ಗ್ಯಾರಂಟಿಗಳಿಗೆ ವ್ಯಯಿಸಿ ಪರಿಶಿಷ್ಟರ ಹಣ ದುಂದು ವೆಚ್ಚವಾಗುತ್ತಿದೆ ಮತ್ತು 2023-24ರ ಸಾಲಿನ ಪರಿಶಿಷ್ಟ ವಿದ್ಯಾರ್ಥಿಗಳ, ವಿದ್ಯಾರ್ಥಿ ವೇತನದ 8ಸಾವಿರ ಅರ್ಜಿಗಳನ್ನು ವಜಾಗೊಳಿಸಿದೆ ಎಂದು ಹೇಳಿದರು.
ಪ.ಜಾ ಮತ್ತು ಪ.ವರ್ಗದ ಹಣವನ್ನು 36 ಇಲಾಖೆಗಳಿಗೆ ಹಂಚಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಪರಿಶಿಷ್ಟರ ಹಣ ಬಳಕೆ ಬಗ್ಗೆ ಶ್ವೇತ ಪತ್ರ ಹೊರಡಿಸಿ ಲೋಕಸಭಾ ಚುನಾವಣೆಗೆ ಬರಲಿ ಎಂದು ಸವಾಲು ಹಾಕಿದರು.
ಜಿಲ್ಲಾಧ್ಯಕ್ಷ ಎಚ್. ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಚೌಡಪ್ಪ ಸುದ್ದಿಗೋಷ್ಠಿಯಲ್ಲಿದ್ದರು.