ಏ. 1 ರಂದು ಸಿಪಿಐ ರಾಜಕೀಯ ಸಮಾವೇಶ

ದಾವಣಗೆರೆ, ಮಾ. 19- ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಯಾವ ಕಾರಣಕ್ಕಾಗಿ ಸೋಲಿಸಬೇಕು ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಏ. 1 ರಂದು ನಗರದಲ್ಲಿ ಸಿಪಿಐ ರಾಜಕೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ 10 ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಸಂಪ ತ್ತನ್ನು ಕೆಲವೇ ಮಂದಿ ಕಾರ್ಪೋರೇಟ್ ಕಂಪನಿಗಳ ಕೈ ಸೇರುವಂತೆ ಮಾಡಿದೆ. ಇದಲ್ಲದೇ ಕೋಟ್ಯಾಂತರ ರೂ. ಚುನಾವಣಾ ಬಾಂಡ್ ಹೆಸರಿನಲ್ಲಿ ಸಂಗ್ರಹ ಮಾಡಿರುವುದು ಬಹಿರಂಗವಾಗಿದೆ. ಇದು ಮೋದಿ ಸರ್ಕಾರ ಮಾಡಿರುವ ಅಕ್ರಮ ವಿಧಾನದ ಭ್ರಷ್ಟಾಚಾರ ಎಂದು ಕಿಡಿಕಾರಿದರು.

ಕಪ್ಪು ಹಣ ತಂದು ದೇಶದ ಪ್ರಜೆಗಳಿಗೆ 15 ಲಕ್ಷ ಹಣ ನೀಡುತ್ತೇನೆ ಎಂದು ಹೇಳಿ ಈಗ ಚುನಾವಣಾ ಬಾಂಡ್ ಮುಖಾಂತರ ಕಪ್ಪು ಹಣವನ್ನು ಬಿಜೆಪಿ ಖಾತೆಗೆ ವರ್ಗಾವಣೆ ಮಾಡಿಕೊಂಡಿದೆ. ಇದು ಮೋದಿಯ ವಿಕಸಿತ ಭಾರತದ ವಿರಾಟ ಭ್ರಷ್ಟಾಚಾರ. ಇದನ್ನು ಸಿಪಿಐ ದೇಶದ ಜನರಿಗೆ ತಿಳಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಹೇಳಿದರು.

ದೇಶದ ರೈತರು ತಾವು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಪಡೆಯಲು ಕೂಡ ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಆದರೆ ಮೋದಿ ಸರ್ಕಾರ ಇದನ್ನು ಒಪ್ಪಿಕೊಳ್ಳದೇ ರೈತ ವಿರೋಧಿ ನಿಲುವು ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳನ್ನು ಆದಾನಿ, ಅಂಬಾನಿಗಳಿಗೆ ಕನಿಷ್ಠ 50 ವರ್ಷಗಳಿಗೆ ಪರಭಾರೆ ಮಾಡುತ್ತಿದೆ. ಇದು ದೇಶದ ರೈತರ, ಕಾರ್ಮಿಕರ, ಯುವಜನರ, ಮಹಿಳೆಯರ ವಿರೋಧಿ ನೀತಿಯಾಗಿದೆ. ದೇಶದ ಸಂವಿಧಾನ ಬದಲಿಸುವ ಗುರಿಯೊಂದಿಗೆ ಮುನ್ನಡೆಯುತ್ತಿರುವ ಮೋದಿ ಸರ್ಕಾರ ದೇಶದ ಪ್ರಜಾಸತ್ತೆಗೆ ಅಪಾಯ ತರಲು ಮುಂದಾಗಿದೆ ಎಂದರು. ಆದ್ದರಿಂದ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ಪದಾಧಿಕಾರಿಗಳಾದ ಆವರಗೆರೆ ಚಂದ್ರು, ಆವರಗೆರೆ ಹೆಚ್.ಜಿ. ಉಮೇಶ್, ಆವರಗೆರೆ ವಾಸು, ಆನಂದರಾಜ್, ಜಿ. ಯಲ್ಲಪ್ಪ, ಕೆ.ಜಿ. ಶಿವಮೂರ್ತಿ ಉಪಸ್ಥಿತರಿದ್ದರು. 

error: Content is protected !!