ತೀರ್ಮಾನ ಆಗುವರೆಗೂ ಮೈತ್ರಿ ಪಾಲನೆ ಬೇಡ

ತೀರ್ಮಾನ ಆಗುವರೆಗೂ ಮೈತ್ರಿ ಪಾಲನೆ ಬೇಡ

ಬಿಜೆಪಿ ದುರಾಡಳಿತದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋತಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ, ಶಿವಮೊಗ್ಗ, ಹಾವೇರಿಯಲ್ಲಿ, ದಾವಣಗೆರೆಯಲ್ಲಿ ಗೊಂದಲವಿದೆ. ಸ್ಪಷ್ಟ ವಾತಾವರಣ ಎಲ್ಲಿಯೂ ಇಲ್ಲ. ದಾವಣಗೆರೆಯಲ್ಲಿ ಬಿಜೆಪಿಗೆ ಗೆಲುವಿನ ವಾತಾವರಣ ಇಲ್ಲ. ಗುಂಪುಗಾರಿಕೆ ಇದೆ. ಅಭ್ಯರ್ಥಿ ಬದಲಾಯಿಸುವಂತೆ ಕೆಲವರು ಪಟ್ಟು ಹಿಡಿದಿದ್ದಾರೆ.

– ಹೆಚ್.ಎಸ್. ಶಿವಶಂಕರ್, ಮಾಜಿ ಶಾಸಕ

ದಾವಣಗೆರೆ, ಮಾ. 19- ಎನ್‌ಡಿಎ ಮೈತ್ರಿಕೂಟದಲ್ಲಿರುವ ಜೆಡಿಎಸ್ ವರಿಷ್ಠರು ಆದೇಶ ನೀಡುವವರೆಗೂ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವವರೆಗೂ  ಕಾರ್ಯಕರ್ತರು ಹಾಗೂ ಮುಖಂಡರು ಮೈತ್ರಿ ಧರ್ಮ ಪಾಲನೆ ಮಾಡಲು ಮುಂದಾಗಬಾರದು ಹಾಗೂ ತಟಸ್ಥವಾಗಿರಬೇಕು ಎಂದು ಜೆಡಿಎಸ್ ಮುಖಂಡರೂ, ಮಾಜಿ ಶಾಸಕರೂ ಆದ ಹೆಚ್.ಎಸ್. ಶಿವಶಂಕರ್ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಡಿಎ ಮೈತ್ರಿ ಕೂಟ ರಚನೆಯಾದಾಗಿ ನಿಂದ ಬಿಜೆಪಿಯವರು ಜೆಡಿಎಸ್ ವರಿಷ್ಠರನ್ನು ಪರಿ ಗಣಿಸದಿರುವುದು ಬೇಸರ ಮೂಡಿಸಿದೆ ಎಂದರು.

ವರಿಷ್ಠರು ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದ ಮೇಲೆ ರಾಜ್ಯದಲ್ಲಿ ಬಿಜೆಪಿಗೆ ಬಲ ಬಂದಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಬಿಜೆಪಿ ನೆಲಕಚ್ಚಿದೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಸುಸ್ಥಿರ ಸ್ಥಿತಿಗೆ ಬರಬೇಕು. ದೇಶದ ಭದ್ರತೆ ಮತ್ತು ಐಕ್ಯತೆ, ಉಗ್ರವಾದ ಹತ್ತಿಕ್ಕಲು ನಮ್ಮ ವರಿಷ್ಠರು ಎನ್‌ಡಿಎ ಬಳಗಕ್ಕೆ ಸೇರಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಗ್ಯಾರಂಟಿಯಿಂದ ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಗ್ಯಾರಂಟಿ ಯೋಜನೆ ರಾಜ್ಯದಲ್ಲಿ ಸಮರ್ಪಕವಾಗಿ ವಿತರಣೆಯಾಗಿಲ್ಲ. ಜನರ ನಿರೀಕ್ಷೆ ಹುಸಿಯಾಗಿದೆ. ಜನರು ಭ್ರಮನಿರಸನರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮುಂದುವರೆಯಲು ಜನರ ಅಪೇಕ್ಷೆ ಇಲ್ಲ. ಆದರೆ ವಿಧಾನಸಭಾ ಚುನಾವಣೆಯಲ್ಲಿ 130 ಸ್ಥಾನ ಬಂದಿರುವುದರಿಂದ ಕಾಂಗ್ರೆಸ್ ಪಕ್ಷದವರು ನಮಗೆ ಸಂಪೂರ್ಣ ಬೆಂಬಲವಿದೆ ಎಂಬ ಭ್ರಮೆಯಲಿದ್ದಾರೆ ಎಂದರು.

ದೇಶಕ್ಕೆ ಒಳಿತಾಗಬೇಕು. ದೇಶ ಅಭಿವೃದ್ಧಿಯಾಗಬೇಕು ಎಂಬ ನಿಟ್ಟಿನಲ್ಲಿ ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ರಾಜಕೀಯ ಜೀವಮಾನದಲ್ಲಿ ದೊಡ್ಡ ತೀರ್ಮಾನ ಕೈಗೊಂಡಿದ್ದಾರೆ. ಜಾತ್ಯತೀತ ನಿಲುವುಗಳಿಗೆ ಬಿಜೆಪಿಯಿಂದ ಧಕ್ಕೆ ಆಗಬಾರದು. ನಮ್ಮ ತತ್ವ – ಸಿದ್ಧಾಂತ, ಬದ್ಧತೆ ಬಿಟ್ಟು ಕೊಡದಂತೆ ಮೈತ್ರಿ ಮಾಡಲಾಗಿದೆ ಎಂದು ತಿಳಿಸಿದರು.

ಹತ್ತಾರು ಬಾರಿ ದೆಹಲಿಗೆ ಕರೆದು ಮಾತನಾಡಿ, ಮೂರರಿಂದ ನಾಲ್ಕು ಸೀಟು ಎಂದಿದ್ದರು. ಆದರೆ, ಅದನ್ನೇ ಘೋಷಿಸಲು ಸಾಧ್ಯವಾಗದಿರುವುದು ಬೇಸರ ಮೂಡಿಸಿದೆ. ಮೈತ್ರಿ ಧರ್ಮ ರಾಜ್ಯದಲ್ಲಿ ಪಾಲನೆಯಾಗುತ್ತಿಲ್ಲ. ನಮಗೆ ನೀಡಿದ ಸೀಟುಗಳಿಗೆ ಹಾಸನ, ಮಂಡ್ಯ ಮತ್ತೊಂದರಲ್ಲಿ ಬಿಜೆಪಿಯ ಮುಖಂಡರು ತಗಾದೆ ತೆಗೆದಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ 20 ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆಯಿಂದ ಗೊಂದಲ ಹೆಚ್ಚಾಗಿದೆ. ಬಿಜೆಪಿ ಮುಖಂಡರು ಅಂದುಕೊಂಡ ರೀತಿ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗುವುದು ಅನುಮಾನವಾಗಿದೆ. ಹೆಚ್ಚು ಸ್ಥಾನ ಬೇಕಿದ್ದರೆ ಜೆಡಿಎಸ್ ಮುಖಂಡರನ್ನು ವಿಶ್ವಾಸಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಬಿಜೆಪಿಗೆ ಪೆಟ್ಟು ಬೀಳಲಿದೆ. ಹಾಸನದ ಜೆಡಿಎಸ್ ಅಭ್ಯರ್ಥಿ ಬದಲಾಯಿಸುವಂತೆ ಮಾಜಿ ಶಾಸಕ ಪ್ರೀತಮ್ ಗೌಡ ತಗಾದೆ ತೆಗೆದಿದ್ದಾರೆ, ಇದು ಸರಿಯಲ್ಲ. ನಿಮಗೊಬ್ಬರಿಗೇ ಅಲ್ಲಾ, ನಮಗೂ ಕೂಡ ತಗಾದೆ ತೆಗೆಯಲು ಬರುತ್ತದೆ. ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದ ಮಾತ್ರಕ್ಕೆ ನಾವೇನು ಶಕ್ತಿ ಕಳೆದುಕೊಂಡಿಲ್ಲ ಎಂದರು.

ಜೆಡಿಎಸ್‌ಗೂ ಗೆಲ್ಲುವ ಶಕ್ತಿ ಇದೆ. ಬಿಜೆಪಿ ಈ ಕ್ಷೇತ್ರದಲ್ಲಿ ವಿಶ್ವಾಸ ಕಳೆದುಕೊಂಡಿದೆ. ಅದಕ್ಕಾಗಿ ಆಂದೋಲನದ ರೀತಿ ಬಿಜೆಪಿಯವರು ಗುಂಪುಗಾರಿಕೆ ಮಾಡಿದ್ದಾರೆ. ಮೈತ್ರಿ ಧರ್ಮ ರಾಜ್ಯದಲ್ಲಿ ಪಾಲನೆ ಮಾಡದಿದ್ದರೆ ಇಲ್ಲಿ ನಾವು ಮಾಡುವುದಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಪರಿಗಣಿಸದೇ ಇರುವುದು ಪಕ್ಷಕ್ಕೆ ಮಾಡಿದ ಅವಮಾನ ಎಂದರು.

ಚುನಾವಣೆಗೆ ಎರಡು ತಿಂಗಳಿದೆ. ಮೈತ್ರಿ ಧರ್ಮ ಪರಿಪಾಲನೆ ಆಗದಿದ್ದರೆ ನಾಯಕರ ಅಪ್ಪಣೆ ಸಿಕ್ಕರೆ ನಾವು ಕೂಡ ಅರ್ಜಿ ಹಾಕಲು ಸಿದ್ಧರಿದ್ದೇವೆ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ಮುಖಂಡರಾದ ರಾಮಚಂದ್ರಮೂರ್ತಿ, ಟಿ. ಅಸ್ಗರ್, ಬಾತಿ ಶಂಕರ್, ಗಾದ್ರಿ ರಾಜು, ಎನ್. ಗಂಗಾಧರಪ್ಪ, ಕುಬೇರಪ್ಪ, ಹೆಚ್.ಕೆ. ಬಸವರಾಜ್, ಉಸ್ಮಾನ್ ಶರೀಫ್, ಜೆ. ಅಮಾನುಲ್ಲಾಖಾನ್ ಉಪಸ್ಥಿತರಿದ್ದರು. 

error: Content is protected !!