ಗೋವುಗಳನ್ನು ಕಸಾಯಿ ಖಾನೆಗೆ ಕಳುಹಿಸಬೇಡಿ

ಗೋವುಗಳನ್ನು ಕಸಾಯಿ ಖಾನೆಗೆ ಕಳುಹಿಸಬೇಡಿ

ದಾವಣಗೆರೆ, ಮಾ. 17 – ದೇಶದಲ್ಲಿ ಗೋವುಗಳ ಸಂರಕ್ಷಣೆಯಾಗಬೇಕು. ಅವುಗಳು ಕಸಾಯಿಖಾನೆಗೆ ಹೋಗುವುದನ್ನು ನಿಲ್ಲಿಸಬೇಕು ಎಂದು ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ನುಡಿದರು.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ, ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ 6ನೇ ದಿನ ಗುರು ರಾಯರ ವರ್ಧಂತಿ ಅಂಗವಾಗಿ ಮೃತ್ತಿಕಾ ವೃಂದಾವನಕ್ಕೆ ಸಹಸ್ರ ಕಳಶ ಕ್ಷೀರಾಭಿಷೇಕ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.

ಹಸುಗಳು ಹಾಲು, ಮೊಸರು, ಬೆಣ್ಣೆ, ತುಪ್ಪ ಸೇರಿ ನಮಗೆ ಬೇಕಾದ ಪದಾರ್ಥಗಳನ್ನು ನೀಡುವ ಕಾಮಧೇನು. ನಾವು ಅವುಗಳಿಗೆ ಕಸ ನೀಡಿದರೆ ಪ್ರತಿಯಾಗಿ ರಸ ಕೊಡುತ್ತವೆ. ನಮಗೆ ಉಪಕಾರ ಮಾಡುವ ಈ ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುವಂತಾಗಬೇಕು. ಅವುಗಳನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಜಗತ್ತಿನಲ್ಲಿ ಎಲ್ಲ ಬಗೆಯ ಕಾರ್ಖಾನೆಗಳಿವೆ, ಆದರೆ ಹಾಲು ಉತ್ಪಾದಿಸುವ ಕೈಗಾರಿಕೆ ಎಲ್ಲಿಯೂ ಇಲ್ಲ. ಗೋಪಾಲ ಕೃಷ್ಣನ (ಗೋವುಗಳು) ಫ್ಯಾಕ್ಟರಿಯಲ್ಲಿ ಮಾತ್ರ ಕ್ಷೀರ ತಯಾರಾಗುತ್ತದೆ ಎಂದು ತಿಳಿಸಿದರು.

ಗುರುಗಳಿಗೆ ಹಾಲಿನ ಅಭಿಷೇಕ ಮಾಡಿದರೆ ಅವರು ನಮಗೆ ಪಂಚಾಮೃತ ನೀಡುತ್ತಾರೆ. ಬ್ಯಾಂಕಿನಲ್ಲಿಟ್ಟಿದ್ದು ಡೆಡ್ ಇನ್‌ವೆಸ್ಟ್‌ಮೆಂಟ್ ಆಗಬಹುದು, ಆದರೆ ಗುರುಗಳಿಗೆ ನೀಡಿದರೆ ಅದರ ನೂರು ಪಟ್ಟು ನಮಗೆ ಅನುಗ್ರಹ ಮಾಡುತ್ತಾರೆ ಎಂದರು.

ಭಾರತ ಹಿಂದೂ ರಾಷ್ಟ್ರವಾಗಬೇಕು, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕು. ರಾಮ ಮಂದಿರ ಪೂರ್ಣವಾಗಬೇಕು, ರಾಮರಾಜ್ಯವಾಗಬೇಕು. ಕಾಶಿ ಕ್ಷೇತ್ರದಲ್ಲಿ ಕಾರಿಡಾರ್ ಅಭಿವೃದ್ಧಿಯಾಗಿದೆ. ಜಗತ್ತಿನ ಆರ್ಥಿಕತೆಯಲ್ಲಿ ಭಾರತ 5ನೇ ಸ್ಥಾನಕ್ಕೇರಿದ್ದು, ಮುಂಬರುವ ದಿನಗಳಲ್ಲಿ ಅದು 1ನೇ ಸ್ಥಾನಕ್ಕೇರಲಿ, ರಾಯರು ಹಾಗೆ ಮಾಡಿಸಲಿ ಎಂದು ಆಶಿಸಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ನಮ್ಮ ಸಂಸ್ಕೃತಿಯಿಂದ ದೂರ ಉಳಿಯುತ್ತಿದ್ದಾರೆ. ಅವರಿಗೆ ಜಾಗೃತಿ ಮೂಡಿಸಬೇಕು. ಕುಂಕುಮ, ಬಳೆ, ಕಾಲುಂಗುರ, ಮೂಗುತಿ ಧರಿಸಿ ನಮ್ಮ ಸಂಸ್ಕೃತಿಯನ್ನು ಪಾಲಿಸಬೇಕು ಎಂದು ತಿಳಿಸಿದರು.

ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿ ಭಗವಂತ ಎಲ್ಲೆಡೆ ಇದ್ದಾನೆ, ಯೋಗಿಗಳಿಗೆ ಮಾತ್ರ ಆತ ಸಿಗುತ್ತಾನೆ. ಅಂಥವರ ಸಂಗವನ್ನು ಮಾಡುವುದರಿಂದ ನಾವೂ ದೇವರ ಬಗ್ಗೆ ಸ್ವಲ್ಪ ತಿಳಿಯಬಹುದು ಎಂದು ಹೇಳಿದರು.

ಎಲ್ಲವನ್ನೂ ಭಗವಂತನಿಗೆ ಸಮರ್ಪಿಸ ಬೇಕು. ಧರ್ಮ ಜಾಗೃತಿಯಾಗಬೇಕು. ಎಲ್ಲರೂ ಸೇರಿ ಭಾರತವನ್ನು ಕಟ್ಟೋಣ ಎಂದು ಸಂದೇಶ ನೀಡಿದರು.

ಮಂತ್ರಾಲಯದ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಾಚರಣೆ ಸಮಿತಿಯ ಅಧ್ಯಕ್ಷ, ಅರ್ಚಕ ಪರಿಮಳಾಚಾರ್ಯ, ವ್ಯಾಸರಾಜಾಚಾರ್ಯ, ರಮಾಕಾಂತಾ ಚಾರ್ಯ, ವಿದ್ವಾನ್ ಕೆ. ಅಪ್ಪಣ್ಣಾಚಾರ್ಯ, ಡಾ. ಜೆ. ಸದಾನಂದ ಶಾಸ್ತ್ರಿ, ಮಹೋತ್ಸವ ಸಮಿತಿಯ ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್ ಭಾಗವಹಿಸಿದ್ದರು.

error: Content is protected !!