ಭಗವದ್ಗೀತೆಯು ಲೌಕಿಕ, ಅಧ್ಯಾತ್ಮಿಕ, ಧಾರ್ಮಿಕ ಮಾರ್ಗದರ್ಶಿ ಸೂತ್ರ

ಭಗವದ್ಗೀತೆಯು ಲೌಕಿಕ, ಅಧ್ಯಾತ್ಮಿಕ, ಧಾರ್ಮಿಕ ಮಾರ್ಗದರ್ಶಿ ಸೂತ್ರ

ಶ್ರೀ ರಾಘವೇಂದ್ರ ಸಪ್ತಾಹದ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ

ದಾವಣಗೆರೆ, ಮಾ. 15- ಭಗವದ್ಗೀತೆಯು ಲೌಕಿಕ, ಅಧ್ಯಾತ್ಮಿಕ, ಧಾರ್ಮಿಕ ಮಾರ್ಗದರ್ಶಿ ಸೂತ್ರವಾಗಿದೆ. ಅದರಲ್ಲಿನ ಶ್ಲೋಕಗಳು ಮಾನವನ ಬದುಕಿನ ದಾರಿಯನ್ನು ತೋರಿಸಿಕೊಡುತ್ತವೆ ಎಂದು ಶಿಕ್ಷಣ ತಜ್ಞ, ವಾಗ್ಮಿ ಗುರುರಾಜ ಕರ್ಜಗಿ ಹೇಳಿದರು.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಶ್ರೀ ರಾಘವೇಂದ್ರ ಸಪ್ತಾಹದ ಐದನೇ ದಿನದ ಕಾರ್ಯಕ್ರಮದಲ್ಲಿ `ಪ್ರಸ್ತುತ ಯುವ ಜನಾಂಗಕ್ಕೆ ಲೌಕಿಕ ಹಾಗೂ ಧಾರ್ಮಿಕ’ ವಿಷಯ ಕುರಿತು ಮಾತನಾಡಿದರು.

ಭಗವದ್ಗೀತೆಯಲ್ಲಿ ನಮ್ಮ ಬದುಕಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಮಕ್ಕಳನ್ನು ಗುರಿಯತ್ತ ಸಾಗುವಂತೆ ಮಾಡಲು ಭಗವದ್ಗೀತೆ ಶ್ಲೋಕಗಳು ಮಾರ್ಗದರ್ಶನ ಮಾಡಲಿವೆ ಎಂದರು.

ಕೇವಲ ನಮ್ಮ ಕುಟುಂಬವೆಂದು ಚಿಂತಿಸದೇ ಇಡೀ ಸಮಾಜಕ್ಕೆ ಒಳಿತು ಬಯಸುವ ಉದ್ದೇಶವನ್ನು ಇಟ್ಟುಕೊಂಡು ಕೊಡುಗೆ ನೀಡಬೇಕು. ಹಿರಿಯರಾದ ನಾವುಗಳು ಮುಂದಿನ ಪೀಳಿಗೆಗೆ ಬದುಕಿನ ಹೆಜ್ಜೆ ಗುರುತುಗಳನ್ನು ಮೂಡಿಸಬೇಕೆಂದು ಸಲಹೆ ನೀಡಿದರು.

ವಯಸ್ಸಾದ ತಂದೆ-ತಾಯಿಗಳು ಮಕ್ಕಳಿಂದ ಯಾವುದೇ ಹಣವನ್ನು ಬಯಸುವುದಿಲ್ಲ. ಬದಲಾಗಿ ಪ್ರೀತಿಯ ಆರೈಕೆ, ಮಾತುಗಳನ್ನು ಬಯಸುತ್ತಾರೆ. ಇಳಿವಯಸ್ಸಿನಲ್ಲಿ ಅವರನ್ನು ಚನ್ನಾಗಿ ನೋಡಿಕೊಳ್ಳಬೇಕೆಂದು ಹಿತ ನುಡಿದರು.

ಧಾರ್ಮಿಕ ಭಾವನೆ ಮತ್ತು ಸಂಸ್ಕೃತಿ ಕೇವಲ ಹೇಳುವುದು, ಕೇಳುವುದರಿಂದ ಬರುವುದಿಲ್ಲ. ಅದನ್ನು ಅನುಸರಿಸಬೇಕು. ಮೌಲ್ಯಗಳನ್ನು ಪಾಠ ಮಾಡುವುದು, ಪುಸ್ತಕದಲ್ಲಿ ಬರೆಯುವುದರಿಂದ ಯಾವುದೇ ಪರಿಣಾಮ ಬೀರದು. ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಅವಶ್ಯವಿದೆ ಎಂದರು.

ಮಕ್ಕಳು ಹೇಳಿದಂತೆ ಮಾಡುವುದಿಲ್ಲ. ನಾವು ಮಾಡಿದಂತೆ ಅನುಕರಣೆ ಮಾಡುತ್ತವೆ. ಆದ್ದರಿಂದ ನಮ್ಮ ನಡೆ, ನುಡಿ ಶುದ್ಧವಾಗಿರಬೇಕು ಎಂದು ಹೇಳಿದರು.

ಧರ್ಮ ತತ್ವ ಮತ್ತು ಆಚಾರ ಎಂಬ ಪ್ರಮುಖ ಎರಡು ಅಂಶಗಳನ್ನೊಳಗೊಂಡಿದ್ದು, ಮೂಲ ತತ್ವವನ್ನೇ ಬಿಟ್ಟು ಬರೀ ಆಚಾರವನ್ನು ಹಿಡಿದು ಹೊರಟಿದ್ದೇವೆ. ಇಂದಿನ ಮಕ್ಕಳಿಗೆ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ತಿಳಿಸಿಕೊಡಬೇಕಾಗಿದೆ ಎಂದರು.

ಅಹಂಕಾರ ಕಳೆದು ಭಕ್ತಿಯಿಂದ ಬಾಗಿದರೆ ಭಗವಂತ ಮೇಲೆ ಬಂದು ಕೈ ಹಿಡಿಯುತ್ತಾನೆ. ಲೌಕಿಕ ಮತ್ತು ಧಾರ್ಮಿಕ ಜೀವನವನ್ನು ಸಮನಾಗಿ ಸ್ವೀಕರಿಸಬೇಕು. ಶ್ರದ್ಧೆ ಇಲ್ಲದ ಯಾವುದೇ ಕೆಲಸ ಸಫಲತೆ ಕಾಣಲು ಸಾಧ್ಯವಿಲ್ಲ. ಚಿಕ್ಕಂದಿನಿಂದಲೇ ಮಕ್ಕಳಿಗೆ ಸಂಸ್ಕಾರ, ಶ್ರದ್ಧೆ, ಭಕ್ತಿ, ಸಂಸ್ಕೃತಿಯನ್ನು ಕಲಿಸಬೇಕೆೆಂದು ಕರೆ ನೀಡಿದರು.

ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು. 

ಲಕ್ಷ್ಮೀ ಶೋಭಾನ ಪಾರಾಯಣ ಮಹೋತ್ಸವದ ಅಂಗವಾಗಿ ಲಕ್ಷ್ಮಿ ಶೋಭಾನ ಸಾಮೂಹಿಕ ಪಾರಾಯಣ ನಡೆಯಿತು. ಶ್ರೀರಂಗಂನ ಸರಸ್ವತಿ ಶ್ರೀಪತಿ ಅವರು ಮಾರ್ಗದರ್ಶನ ನೀಡಿ ಪದ್ಯದ ಅರ್ಥ ಮತ್ತು ತಾತ್ಪರ್ಯವನ್ನು ತಿಳಿಸಿಕೊಟ್ಟರು.

ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡ ಭಕ್ತರು ದನಿಗೂಡಿಸಿದರು. ಜೊತೆಗೆ ಲಕ್ಷ್ಮಿದೇವಿಯ ಮೂರ್ತಿಗೆ ಕುಂಕುಮಾರ್ಚನೆ ಮಾಡಲಾಯಿತು. ನಂತರ ವಿದ್ವಾನ್ ಕಪಿಲಾಚಾರ್ಯ ಗಲಗಲಿ ಅವರು ಲಕ್ಷ್ಮಿ ಶೋಭಾನದ ಪ್ರವಚನ ನಡೆಸಿಕೊಟ್ಟರು. 

error: Content is protected !!