ನಾವು ಮಾಡುವ ಕರ್ಮಗಳನ್ನು ಭಗವಂತನಿಗೆ ಸಮರ್ಪಿಸಬೇಕು

ನಾವು ಮಾಡುವ ಕರ್ಮಗಳನ್ನು ಭಗವಂತನಿಗೆ ಸಮರ್ಪಿಸಬೇಕು

ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದಲ್ಲಿ ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು

ದಾವಣಗೆರೆ, ಮಾ. 13 – ಜೀವನದಲ್ಲಿ ನಾವು ಮಾಡುವ ಕರ್ಮಗಳನ್ನು ಭಗವಂತನಿಗೆ ಸಮರ್ಪಣೆ ಮಾಡಬೇಕು ಎಂದು ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಹೇಳಿದರು.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಯುತ್ತಿರುವ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಪಾದಂಗಳ ವರು ಅನುಗ್ರಹ ಸಂದೇಶ ನೀಡಿದರು.

ಕರ್ಮ ಮಾಡುವುದು ಎಷ್ಟು ಮುಖ್ಯವೋ, ಅದರ ಸಮರ್ಪಣೆಯೂ ಅಷ್ಟೇ ಮುಖ್ಯ. ದೇವರಿಗೆ ಅರ್ಪಿಸಿಬಿಟ್ಟರೆ ಅದು ಸುರಕ್ಷಿತ. ಅದಕ್ಕೆ ಬಡ್ಡಿ, ಚಕ್ರ ಬಡ್ಡಿಯನ್ನು ಹಾಕಿ ಸ್ವಾಮಿಯು ನಮಗೆ ಕೊಡಬೇಕಾಗಿದ್ದನ್ನು ಕರುಣಿಸುತ್ತಾನೆ. ಇದನ್ನು ರಾಯರು ‘ಸರ್ವ ಸಮರ್ಪಣ’ ಗದ್ಯದಲ್ಲಿ ವಿವರಿಸಿದ್ದಾರೆ ಎಂದು ತಿಳಿಸಿದರು.

 ದೇವರು ಎಲ್ಲರಿಗೂ ಸಂಬಂಧಪಟ್ಟವ, ಆತ ಎಲ್ಲರಲ್ಲೂ ಇದ್ದಾನೆ. ದೇವರೇ ಇಲ್ಲ ಎನ್ನುವವರಿಗೆ ರಾಯರು ಉತ್ತರ ನೀಡಿದ್ದಾರೆ. ಎಚ್ಚರದಲ್ಲಿ ನಾವು ಕಂಡಿದ್ದನ್ನು ಭಗವಂತ ಸಂಗ್ರ ಹಿಸಿ ಇಟ್ಟಿರುತ್ತಾನೆ. ನಮ್ಮ ಕಡತಗಳು ಆತನ ಕೋರ್ಟ್‌ನಲ್ಲಿ ಕಳೆದು ಹೋಗುವ ಪ್ರಶ್ನೆ ಇಲ್ಲ ಎಂದು ಹೇಳಿದರು.

ಭಗವಂತ ಕರುಣಾಮಯಿ. ಆತನಲ್ಲಿ ಭಕ್ತಿ ಮಾಡಿದರೆ ನಮಗೆ ದಾರಿ ತೋರಿಸುತ್ತಾನೆ. ಎಚ್ಚರದ ಅವಸ್ಥೆಯಲ್ಲಿ ಕೆಲವು ಸಂಗತಿಗಳು ನಮ್ಮ ಅನುಭವಕ್ಕೆ ಬರುತ್ತವೆ. ಸ್ವಪ್ನದಲ್ಲಿ ಬರುವುದೆಲ್ಲ ಸುಳ್ಳು ಎನ್ನುವ ಭಾವನೆ ಸಾಮಾನ್ಯವಾಗಿದೆ. ಆದರೆ ಕೆಲವು ವಿಷಯಗಳನ್ನು ದೇವರು ಸ್ವಪ್ನದಲ್ಲಿ ಅನುಭವಕ್ಕೆ ನಿಲುಕುವಂತೆ ಮಾಡುತ್ತಾನೆ ಎಂದು ತಿಳಿಸಿದರು.

ಜೀವನದ ಮೂಲ ಗುರಿ ಆನಂದ. ಭಗವಂತನು ಆನಂದಮಯನಾಗಿದ್ದಾನೆ. ಪ್ರಾಜ್ಞ ರೂಪಿಯಾದ ಆತನನ್ನು ಉಪಾಸನೆ ಮಾಡುವುದರಿಂದ ನಮಗೆ ಆನಂದದ ಅನುಭವವನ್ನು ಕೊಡುತ್ತಾನೆ ಎಂದರು.

ರಸಪ್ರಶ್ನೆ ಕಾರ್ಯಕ್ರಮ :  ಶ್ರೀ ಗುರು ರಾಘವೇಂದ್ರ ಸ್ವಾಮಿ ಗಳು ರಚಿಸಿದ ‘ಶ್ರೀರಾಮ ಚಾರಿತ್ರ್ಯ ಮಂಜರಿ’ ಕೃತಿ ಯನ್ನು ಆಧರಿಸಿ, ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಮಾಯಣದ ಸಾರ ಸಂಗ್ರಹವನ್ನು 11 ಶ್ಲೋಕಗಳಲ್ಲಿ ಹಿಡಿದಿಟ್ಟಿರುವುದು ಈ ಗ್ರಂಥದ ವಿಶೇಷತೆಯಾಗಿದೆ.

ವಿವಿಧ ಭಜನಾ ಮಂಡಳಿಗಳ 24 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಒಂದೊಂದು ತಂಡದಲ್ಲಿ ಇಬ್ಬರು ಸ್ಪರ್ಧಿಗಳಿದ್ದರು. 75 ಅಂಕಗಳ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಲಾಗಿತ್ತು. ಡಾ. ರೂಪಶ್ರೀ ಶಶಿಕಾಂತ್ (ಪ್ರಥಮ), ಸಮೀರ್ ಯಜುರ್ವೇದಿ, ಶ್ರೀನಿಧಿ ಯಜುರ್ವೇದಿ (ದ್ವಿತೀಯ), ಸಂಧ್ಯಾ ಪ್ರಕಾಶ್, ಕೆ.ಎಸ್. ಯಮುನಾ (ತೃತೀಯ) ಬಹುಮಾನ ಪಡೆದರು.

ರಸಪ್ರಶ್ನೆಯ ಪರಿಕಲ್ಪನೆ ಹಾಗೂ ನಿರ್ವಹಣೆಯನ್ನು ಅನಿಲ್ ರಾಮಧ್ಯಾನಿ ಮಾಡಿದರು. ಪ್ರಶ್ನೆಪತ್ರಿಕೆಯನ್ನು ಗೋಪಾಲಾಚಾರ್ ಮಣ್ಣೂರ್ ಬಿಡುಗಡೆ ಮಾಡಿದರು.

ಮೋಡಿ ಮಾಡಿದ ಬಾಲಕ : ಆತ ಕೇವಲ 7 ವರ್ಷದ ಪುಟ್ಟ ಬಾಲಕ. ಅದ್ಭುತ ಕೊಳಲು ವಾದನದ ಮೂಲಕ ರಾಯರ ಭಕ್ತರಿಗೆ ಮೋಡಿ ಮಾಡಿದ. 3ನೇ ತರಗತಿಯಲ್ಲಿ ಓದುತ್ತಿರುವ ಆ ಬಾಲ ಕಲಾವಿದನ ಹೆಸರು ಸುಧಾಂಶು ಕಟ್ಟಿ. ಹರಪನಹಳ್ಳಿ ಮೂಲದ ಅವರ ಪಾಲಕರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಶಾಸ್ತ್ರೀಯ ಆಲಾಪ್ ಮೂಲಕ ಕಛೇರಿ ಆರಂಭಿಸಿದ ಸುಧಾಂಶು, ಭಾಗ್ಯದ ಲಕ್ಷ್ಮಿ ಬಾರಮ್ಮ, ತೋಳು ತೋಳು ತೋಳು ರಂಗ ತೋಳನ್ನಾಡೈ, ಆವ ಕುಲವೋ ರಂಗ, ರತ್ನ ದೊರಕಿತಲ್ಲ ಎನಗೊಂದು, ಏನ್ ಸವಿ ಏನ್ ಸವಿ ಮುಂತಾದ ಹಾಡುಗಳ ಸವಿಯನ್ನು ಉಣಬಡಿಸಿದರು.

error: Content is protected !!