18 ರಂದು ಶಿವಮೊಗ್ಗಕ್ಕೆ ಪ್ರಧಾನಿ ಮೋದಿ

18 ರಂದು ಶಿವಮೊಗ್ಗಕ್ಕೆ ಪ್ರಧಾನಿ ಮೋದಿ

ದಾವಣಗೆರೆ, ಮಾ. 13- ಇದೇ ದಿನಾಂಕ 18 ರಂದು ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನದಲ್ಲಿ ಏರ್ಪಾಡಾಗಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳ ಜನತೆಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆಂದು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಈ ದೇಶವ ನ್ನು ಆರ್ಥಿಕವಾಗಿ, ರಕ್ಷಣಾತ್ಮಕವಾಗಿ, ಆರೋಗ್ಯಕರ ವಿಷಯವಾಗಿ ರೈತರ ಕಷ್ಟಗಳಲ್ಲಿ ಯುವಕರ, ಮಹಿಳೆಯರ, ಬಡವರ ವಿಚಾರದಲ್ಲಿ ಆಶಾಕಿರಣವಾಗಿ ಹೊರಹೊಮ್ಮಿರುವ ಪ್ರಧಾನಿ ನರೇಂದ್ರ ಮೋದಿ  ರಾಜ್ಯಕ್ಕೆ ಆಗಮಿಸುತ್ತಿರುವುದು ಸಂತಸದ ವಿಚಾರ ಎಂದರು.

ಶಿವಮೊಗ್ಗ ಅಲ್ಲಮಪ್ರಭು ಮೈದಾನದ 50 ಎಕರೆ ವಿಶಾಲವಾದ ಜಾಗದಲ್ಲಿ ಪ್ರಧಾನ ಮಂತ್ರಿಗಳು ಸಭೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಶಿವಮೊಗ್ಗ ಜಿಲ್ಲಾ ಭಾರತೀಯ ಜನತಾ ಪಾರ್ಟಿ ವ್ಯವಸ್ಥೆ ಯನ್ನು ಈಗಾಗಲೇ ಮಾಡುತ್ತಿದೆ. ಪ್ರಧಾನ ಮಂತ್ರಿಗಳ ಕಾರ್ಯಕ್ರಮಕ್ಕೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗ ಳಿಂದ ಕನಿಷ್ಠ ಐದು ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದಾವಣಗೆರೆ ಉತ್ತರ ಮತ್ತು ದಕ್ಷಿಣ, ಜಗಳೂರು, ಹರಪನಹಳ್ಳಿ, ಮಾಯಕೊಂಡ, ಚನ್ನಗಿರಿ, ಹರಿಹರ, ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ವಿಶೇಷವಾಗಿ ಹೊಸ ಮತದಾರರನ್ನು, ರೈತರು, ಮಹಿಳೆಯರು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯ ಹಾಗೂ ಹಿಂದುಳಿದ ವರ್ಗದ ಹಾಗೂ ಅಲ್ಪಸಂಖ್ಯಾತ ಬಂಧುಗಳು ತಂಡ ತಂಡವಾಗಿ ಬರುವ ನಿರೀಕ್ಷೆಯನ್ನು ಭಾರತೀಯ ಜನತಾ ಪಾರ್ಟಿ ಹೊಂದಿದೆ ಎಂದರು.

ಕಳೆದ 10 ವರ್ಷಗಳಿಂದ ಮೋದಿ ಯವರು ನೀಡಿದಂತಹ ಯೋಜನೆಗಳನ್ನು ಜನರಿಗೆ ತಿಳಿಸುವ ಉದ್ದೇಶ ಹೊಂದ ಲಾಗಿದೆ. ಜೊತೆಗೆ ರಾಮಮಂದಿರ ಉದ್ಘಾ ಟನೆ ನಂತರ ಇದೇ ಮೊದಲಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಜನರು ಕಾತರದಿಂದ ಕಾಯುತ್ತಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಪಿ. ಹರೀಶ್, ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಮುಖಂಡರಾದ ಧನಂಜಯ ಕಡ್ಲೇಬಾಳು, ಸತೀಶ್ ಕೊಳೇನಹಳ್ಳಿ, ಶಿವರಾಜ್ ಪಾಟೀಲ್, ಅನಿಲ್ ಕುಮಾರ್ ನಾಯಕ್, ಕೊಟ್ರೇಶಗೌಡ್ರು, ಶಾಮನೂರು ಹರೀಶ್, ಶಶಿಧರ್, ಹೆಚ್.ಪಿ. ವಿಶ್ವಾಸ್ ಉಪಸ್ಥಿತರಿದ್ದರು.

error: Content is protected !!