ಸಿದ್ದೇಶ್ವರ ಬಿಗಿ ಪಟ್ಟಿಗೆ ಯಶಸ್ಸು

ಸಿದ್ದೇಶ್ವರ ಬಿಗಿ ಪಟ್ಟಿಗೆ ಯಶಸ್ಸು

ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಟಿಕೆಟ್ ಘೋಷಣೆ

ದಾವಣಗೆರೆ, ಮಾ. 13 – ದಾವಣ ಗೆರೆ ಲೋಕಸಭಾ ಕ್ಷೇತ್ರದ ಮೇಲಿನ ಬಿಗಿ ಪಟ್ಟು ಉಳಿಸಿಕೊಳ್ಳುವಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಯಶಸ್ವಿಯಾಗಿದ್ದು, ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ಪಡೆದುಕೊಂಡಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ದಿವಂಗತ ಜಿ. ಮಲ್ಲಿಕಾರ್ಜುನಪ್ಪ ಅವರು 1996ರಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ್ದರು. ನಂತರ 1999ರಲ್ಲಿ ಮತ್ತೆ ಗೆಲುವು ಸಾಧಿಸಿದ್ದರು. 

ನಂತರ ಜಿ.ಎಂ. ಸಿದ್ದೇಶ್ವರ ಅವರು ದಾವಣಗೆರೆ ಕ್ಷೇತ್ರದಲ್ಲಿ 2004, 2009, 2014 ಹಾಗೂ 2019ರಲ್ಲಿ ಸತತ ಗೆಲುವು ಸಾಧಿಸುತ್ತಾ ಬಂದಿದ್ದಾರೆ.

ಈ ಬಾರಿ ಅವರು ಟಿಕೆಟ್ ಪಡೆಯುವ ವಿಚಾರದಲ್ಲೇ ಜಿಲ್ಲಾ ಬಿಜೆಪಿಯಲ್ಲಿ ಮೊದಲ ಬಾರಿಗೆ ಒಡಕಿನ ಮಾತು ಕೇಳಿ ಬಂದಿತ್ತು. ಅದರಲ್ಲೂ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಎಲ್ಲರಿಗಿಂತ ಮುಂಚೂಣಿಯಲ್ಲಿ ನಿಂತು ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಬಾರದು ಎಂದು ಪಟ್ಟು ಹಿಡಿದಿದ್ದರು. ಈ ಬಾರಿ ಬದಲಾವಣೆ ಖಚಿತ ಎಂದು ಬಿಜೆಪಿಯ ಹಲವಾರು ಮುಖಂಡರು ಬಹಿರಂಗವಾಗಿ ಹಾಗೂ ಖಾಸಗಿಯಾಗಿ ಹೇಳಿಕೊಡಿದ್ದರು.

ಆದರೆ, ಸಂಸದ ಸಿದ್ದೇಶ್ವರ ಮಾತ್ರ ಈ ಬಾರಿ ನನಗೆ ಇಲ್ಲವೇ ನನ್ನ ಕುಟುಂಬದವರಿಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಸಂಸದ ಸಿದ್ದೇಶ್ವರ ಅವರು ತಮ್ಮ ಪತ್ನಿಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಬಿಜೆಪಿ ಮತ್ತೊಮ್ಮೆ ಲೋಕಸಭಾ ಚುನಾವಣಾ ಗೆಲುವಿಗಾಗಿ ಜಿ.ಎಂ. ಕುಟುಂಬವನ್ನೇ ಅವಲಂಬಿಸಿದಂತಾಗಿದೆ. 

ಬಿಜೆಪಿ ಅಭ್ಯರ್ಥಿ ಪ್ರಕಟವಾಗಿದ್ದರೂ, ಕಾಂಗ್ರೆಸ್ ಅಭ್ಯರ್ಥಿಯ ಕುತೂಹಲ ಮುಂದುವರೆದಿದೆ. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಇಲ್ಲವೇ ಇನ್‌ಸೈಟ್ಸ್
ಐಎಎಸ್‌ನ ಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಅವರಲ್ಲಿ ಒಬ್ಬರಿಗೆ ಟಿಕೆಟ್ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

error: Content is protected !!