ವಚನ ಸಾಹಿತ್ಯದ ಮೂಲಕ ಜೀವನ ಮೌಲ್ಯ ಬಿತ್ತಿದ ವಚನಕಾರ್ತಿಯರು

ದಾವಣಗೆರೆ, ಮಾ. 10- ಹನ್ನೆರಡನೇ ಶತಮಾನದಲ್ಲಿ ಶರಣರು ವಚನ ಸಾಹಿತ್ಯದ ಮೂಲಕ ಜೀವನ ಮೌಲ್ಯಗಳನ್ನು ಬಿತ್ತಿದ್ದರು. ಮಹಿಳೆಗೆ ವಿಶೇಷ ಸ್ಥಾನಮಾನ ಕಲ್ಪಿಸಿದ ಕೀರ್ತಿ ಅಂದಿನ ಬಸವಣ್ಣನವರನ್ನು ಮೊದಲ್ಗೊಂಡು ಅನೇಕ ಶರಣರಿಗೆ ಸಲ್ಲುತ್ತದೆ ಎಂದು ಸರಸ್ವತಿ ಬಡಾವಣೆಯ ಮಂಜುನಾಥ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಎಂ.ಹೆಚ್. ವಿಜಯಕುಮಾರ್ ಹೇಳಿದರು.

ನಗರದ ತರಳಬಾಳು ಬಡಾವಣೆಯಲ್ಲಿನ ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪದಲ್ಲಿ ಶಿವಗೊಷ್ಠಿ ಸಮಿತಿ ಹಾಗೂ ಸಾದರ ನೌಕರರ ಬಳಗದ ವತಿಯಿಂದ ಮೊನ್ನೆ ಹಮ್ಮಿಕೊಂಡಿದ್ದ ಶಿವಗೋಷ್ಠಿ-303, ಸ್ಮರಣೆ-77 ಕಾರ್ಯಕ್ರಮದಲ್ಲಿ `ವಚನ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ’ ಕುರಿತು ಮಾತನಾಡಿದರು.

12 ನೇ ಶತಮಾನದ ವಚನ ಸಾಹಿತ್ಯ ಮಾತ್ರ ಮಹಿಳಾ ಅಭಿವ್ಯಕ್ತಿಗೆ ಒಂದು ವೇದಿಕೆ ಕಲ್ಪಿಸಿಕೊಟ್ಟಿತ್ತು. 33 ವಚನಕಾರ್ತಿಯರು ಏಕಕಾಲದಲ್ಲಿ ವಚನ ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು ಎಂದರು.

ಮೊದಲ ವಚನಕಾರ್ತಿ ಅಕ್ಕಮಹಾದೇವಿಯಾಗಿದ್ದು, ಆಯ್ದಕ್ಕಿ ಲಕ್ಕಮ್ಮ,  ಸತ್ಯಕ್ಕ, ನಾಗಲಾಂಬಿಕೆ, ಮುಕ್ತಾಯಕ್ಕ, ಕೇತಲದೇವಿ, ಕಾಳವ್ವೆ, ಗಂಗಮ್ಮ, ಗೊಗ್ಗವ್ವೆ, ಬೊಂತಾದೇವಿ, ನೀಲಾಂಬಿಕೆ ಮೊದಲಾದವರು ವಚನ ಸಾಹಿತ್ಯದ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದರು ಜೊತೆಗೆ ಸತ್ಯ ಶುದ್ಧ ಕಾಯಕದಲ್ಲಿ ತೊಡಗಿದ್ದರು ಎಂದು ಹೇಳಿದರು.

ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಘೋಷಣೆ ಕೂಗುತ್ತಲೇ ಬಂದಿದ್ದರೂ ಸಹ ಸಮಾಜದಲ್ಲಿ ಮಹಿಳೆಯು  ವೇದಗಳ ಕಾಲದಿಂದಲೂ ಶೋಷಣೆಗೆ ಒಳಗಾಗುತ್ತಲೇ ಬಂದಿದ್ದು, ಪ್ರಸ್ತುತ ಸಂದರ್ಭದಲ್ಲೂ ಸಹ ಶೋಷಣೆ, ದೌರ್ಜನ್ಯ, ಅತ್ಯಾಚಾರ, ಅನಾಚಾರಕ್ಕೆ, ವರದಕ್ಷಿಣೆ ಕಿರುಕುಳಕ್ಕೆ ಒಳಗಾಗುತ್ತಲೇ ಬಂದಿದ್ದಾಳೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಹನ್ನೆರಡನೇ ಶತಮಾನದಲ್ಲಿ ಶರಣ-ಶರಣೆಯರು ಸರಿಸಮನಾಗಿ ಬದುಕಿದರು. ಅತ್ಯಂತ ಪೂಜ್ಯನೀಯ ಸ್ಥಾನವನ್ನು ಕಲ್ಪಿಸಲಾಗಿತ್ತು ಎಂದರು.

ಮಾಗನೂರು ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಮಾಗನೂರು ಸಂಗಮೇಶ್ವರ ಗೌಡ್ರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಿಂ. ಬಿ.ಜಿ. ಚಂದ್ರಪ್ಪ ಅವರ ಸ್ಮರಣೆಯನ್ನು ಅವರ ಪುತ್ರ ಡಾ. ಇಡಗುಂಜಿ ಗಣೇಶ್ ಮಾಡಿದರು. ಬಿ.ಜಿ. ಸುಲೋಚನಮ್ಮ ಲಿಂ. ಚಂದ್ರಪ್ಪ ಉಪಸ್ಥಿತರಿದ್ದರು.

ಸಂಗೀತ ಶಿಕ್ಷಕ ರೇವಣಸಿದ್ಧಪ್ಪ ಮತ್ತು ಕಿತ್ತೂರು ಚನ್ನಮ್ಮ ಸಂಗಿತ ಬಳಗದ ಮಹಿಳೆಯರು ವಚನ ಸಂಗಿತವನ್ನು ನಡೆಸಿಕೊಟ್ಟರು. ಪ್ರಾಚಾರ್ಯ ಡಾ. ಎಂ.ಸಿ. ಕಾವೇರಿಗೌಡ ಸ್ವಾಗತಿಸಿದರು.

error: Content is protected !!