ಸಮಾನ ಹಕ್ಕು ನೀಡುವುದು ವಿಶ್ವ ಸಾಮಾಜಿಕ ನ್ಯಾಯ ದಿನದ ಉದ್ಧೇಶ : ಅರುಣ್ ಕುಮಾರ್

ದಾವಣಗೆರೆ, ಮಾ. 10-   ಹಿಂದುಳಿದವರು, ಬಡವರು, ಶೋಷಿತರು, ಅಸಹಾಯಕರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಖ್ಯವಾಹಿನಿಗೆ ತರಲು  ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದೇ ಸಾಮಾಜಿಕ ನ್ಯಾಯದ ಉದ್ದೇಶವಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಹೇಳಿದರು.

ನಗರದ ದೇವರಾಜ್ ಅರಸ್ ಬಡಾವಣೆಯಲ್ಲಿನ ವಿಕಲಾಂಗ ವ್ಯಕ್ತಿಗಳ ಕೌಶಲ್ಯ ಅಭಿವೃದ್ಧಿ,
ಪುನರ್ವಸತಿ ಮತ್ತು ಸಬಲೀಕರಣಕ್ಕಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರದಲ್ಲಿ (ಸಿಆರ್‌ಸಿ ಸಭಾಂಗಣದಲ್ಲಿ ) `ವಿಶ್ವ ಸಾಮಾಜಿಕ ನ್ಯಾಯ ದಿನ’ ದ ಅಂಗವಾಗಿ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು, ಆರೈಕೆ ನೀಡುವವರು ಮತ್ತು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು. 

ಸಮಾಜದಲ್ಲಿರುವ ಎಲ್ಲಾ ರೀತಿಯ ತಾರತಮ್ಯ ಮತ್ತು ಅಸಮಾನತೆ ಇಲ್ಲದೇ ವ್ಯಕ್ತಿಗೆ ಸಮಾನ ಹಕ್ಕುಗಳನ್ನು ನೀಡುವುದು ವಿಶ್ವ ಸಾಮಾಜಿಕ ನ್ಯಾಯ ದಿನದ ಪ್ರಮುಖ ಉದ್ದೇಶವಾಗಿದೆ ಎಂದರು.

ದೇಶದ ಎಲ್ಲಾ ಪ್ರಜೆಗಳಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸಿಕೊಡುವುದನ್ನು  ಭಾರತದ ಸಂವಿಧಾನದಲ್ಲಿ ಸ್ಪಷ್ಟಪಡಿಸಿದೆ. ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಸಂವಿಧಾನಾತ್ಮಕ ಪರಿಹಾರದ ಹಕ್ಕುಗಳನ್ನು ನೀಡಲಾಗಿದೆ ಎಂದು ಹೇಳಿದರು.

ಸಂವಿಧಾನದಲ್ಲಿ  ವಿಕಲಚೇತನ ಹಕ್ಕುಗಳ ರಕ್ಷಣೆ ಮತ್ತು ಅವರ ಸುರಕ್ಷತೆಯು ಮಾನವ ಹಕ್ಕುಗಳ ಅಡಿಯಲ್ಲಿ ಬರಲಿದ್ದು, ಅವರಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು. 

ದಾವಣಗೆರೆ ಸಿಆರ್‍ಸಿ ನಿರ್ದೇಶಕಿ ಮೀನಾಕ್ಷಿ ಮಾತನಾಡಿ, ದಾವಣಗೆರೆ ಸಿಆರ್‍ಸಿ ಕೇಂದ್ರವು 21 ಬಗೆಯ ವಿಕಲಚೇತನರಿಗೆ ಪುನರ್ವಸತಿ ಶಿಕ್ಷಣ, ಸರ್ಕಾರದ ಯೋಜನೆಗಳನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.  

ವಿಕಲಚೇತನರ ಸಂಘಟನೆಯ ಮುಖಂಡರಾದ ವಿಜಯಲಕ್ಷ್ಮಿ, ಎನ್‍ಐಇಪಿಐಡಿ ನಿರ್ದೇಶಕ ಬಿ.ವಿ.ರಾಮಕುಮಾರ್, ದಾವಣಗೆರೆ ಸಿಆರ್‍ಸಿ ಸಂಯೋಜಕ ವಿ.ಕನಗ ಸಭಾಪತಿ ಮತ್ತಿತರರು ಭಾಗವಹಿಸಿದ್ದರು.

error: Content is protected !!