`ಬಹು ಜನರ ನಡಿಗೆ ಪಾರ್ಲಿಮೆಂಟ್‌ ಕಡೆಗೆ’

ದಾವಣಗೆರೆ, ಮಾ. 8- ಬಹುಜನ ಸಮಾಜ ಪಾರ್ಟಿ ಬೆಂಗಳೂರು ಇವರ ವತಿಯಿಂದ ಸಂವಿಧಾನ ಸಂರಕ್ಷಣೆ ಮತ್ತು ಸಂಪೂರ್ಣ ಜಾರಿಗಾಗಿ `ಬಹುಜನರ ನಡಿಗೆ ಪಾರ್ಲಿಮೆಂಟ್ ಕಡೆಗೆ’ ಬೆಂಗಳೂರು ವಿಭಾಗ ಮಟ್ಟದ ಸಮಾವೇಶವನ್ನು ನಾಳೆ ದಿನಾಂಕ 9 ರಂದು ಬೆಂಗಳೂರು ದೇವನಹಳ್ಳಿ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಹೆಚ್. ಮಲ್ಲೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ಸಂವಿಧಾನ’ ಪ್ರಸ್ತುತ ದೇಶದೆಲ್ಲೆಡೆ ಚರ್ಚೆಗೆೆ ಒಳಗಾಗುತ್ತಿರುವ ವಿಷಯವಾಗಿದೆ. ಬಿಜೆಪಿ ತಾನು ಸರ್ಕಾರ ರಚಿಸುವಾಗಲೆಲ್ಲಾ ಸಂವಿಧಾನ ಬದಲಾಯಿಸುವುದಾಗಿ ಹೇಳುತ್ತಲೇ ಬಂದಿದೆ. ಈ ಹಿಂದೆ ಎನ್‌ಡಿಎ ಸರ್ಕಾರ ಸಂವಿಧಾನ ಬದಲಾವಣೆ ಕೈ ಹಾಕಲು ಮುಂದಾದಾಗ ಕಾನ್ಷಿರಾಮ್ ಅವರ ಹೋರಾಟಕ್ಕೆ ಹೆದರಿ ಸುಮ್ಮನಾದರು ಎಂದು ಹೇಳಿದರು.

ಸಮಾವೇಶದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಮುನಿಯಪ್ಪ, ಉಪಾಧ್ಯಕ್ಷ ಡಿ.ಎಸ್. ಗಂಗಾಧರ್, ಬಹುಜನ, ರಾಜ್ಯ ಕಾರ್ಯದರ್ಶಿ ಹೆಚ್. ಮಲ್ಲೇಶ್, ರಾಜ್ಯ ಸಮಿತಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಹುಜನ ಪಾರ್ಟಿಯಿಂದ ನಾಲ್ವರು ಆಕಾಂಕ್ಷಿಗಳಿದ್ದು, ಇದೇ ದಿನಾಂಕ 12 ರಂದು ನಡೆಯುವ ರಾಜ್ಯ ಸಮಿತಿ ಸಭೆಯಲ್ಲಿ ಅಂತಿಮವಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ, ಯಶೋಧ ಪ್ರಕಾಶ್, ಜೆ.ಡಿ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.  

error: Content is protected !!