ಜಗಳೂರಿನಲ್ಲಿ ಇಂದು `ಜಗಳೂರು ಸೀಮೆಯ ಜಾತ್ರೆಗಳು’ ಕೃತಿ ಬಿಡುಗಡೆ

ಜಗಳೂರಿನಲ್ಲಿ ಇಂದು `ಜಗಳೂರು ಸೀಮೆಯ ಜಾತ್ರೆಗಳು’ ಕೃತಿ ಬಿಡುಗಡೆ

ಜಗಳೂರು, ಮಾ. 8 – ನಿವೃತ್ತ ಪ್ರಾಚಾ ರ್ಯರಾದ ಡಾ. ಸಂಗೇನಹಳ್ಳಿ  ಅಶೋಕ್ ಕುಮಾರ್  ಅವರು ರಚಿಸಿರುವ `ಜಗಳೂರು ಸೀಮೆಯ ಜಾತ್ರೆಗಳು’ ಕೃತಿ ಬಿಡುಗಡೆ ನಾಳೆ ದಿನಾಂಕ 9 ರಂದು ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆಯಲಿದೆ.

ಪಟ್ಟಣದ ಎಂಆರ್ ಕಂಫರ್ಟ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೃತಿಯ ಲೇಖಕರಾದ ಡಾ. ಸಂಗೇನಹಳ್ಳಿ ಅಶೋಕ್ ಕುಮಾರ್  ಅವರು, ಸಾಂಸ್ಕೃತಿಕವಾಗಿ ವೈವಿಧ್ಯತೆಯಿಂದ ಕೂಡಿರುವ ಜಗಳೂರು ತಾಲ್ಲೂಕಿನ ವಿವಿಧ ಜಾತ್ರೆಗಳು, ಪರವು, ಮಠಗಳ ಉತ್ಸವಗಳು, ಸಂಸ್ಕೃತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಕ್ರೋಢೀಕರಿಸಿ ಕೃತಿಯನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು. ಜಾತ್ರೆಗಳು, ಉತ್ಸವಗಳು ಮತ್ತು ರಥೋತ್ಸವಗಳು ಬುಡಕಟ್ಟು ಸಂಸ್ಕೃತಿ ಪರಂಪರೆಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಪ್ರಕ್ರಿಯೆಯಾಗಿ  500 ಪುಟಗಳ ಈ  ಕೃತಿ ಹೊರಬಂದಿದೆ.

ನಿವೃತ್ತ ಪ್ರಾಂಶುಪಾಲ ಎಂ. ಬಸವಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ನನ್ನ ಮಾತೃಶ್ರೀ ಕೆ.ಎಸ್. ಹನುಮಕ್ಕ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕೃತಿಯ ಕುರಿತು ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಗೋಟಗೋಡಿ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಟಿ.ಎಂ. ಭಾಸ್ಕರ್ ಮತ್ತು ಕುವೆಂಪು ವಿಶ್ವವಿದ್ಯಾನಿಲಯದ ಜಾನಪದ ವಿದ್ವಾಂಸ ಡಾಕ್ಟರ್ ಬಸವರಾಜ್‌ ನೆಲ್ಲಿ ಸರ್‌ ಅವರು ಭಾಗವಹಿಸಲಿದ್ದಾರೆ. ಸಮಾರಂಭಕ್ಕೂ ಮುನ್ನ ಪಟ್ಟಣದ ಡಾ. ಬಿ.ಆರ್.  ಅಂಬೇಡ್ಕರ್ ವೃತ್ತದಿಂದ ವಾಲ್ಮೀಕಿ ಭವನದವರೆಗೆ ಡೊಳ್ಳು ,ಕಹಳೆ ಪೋತ ರಾಜರ ಕುಣಿತ ಸೇರಿದಂತೆ ಎತ್ತಿನ ಗಾಡಿಗಳ ಮೆರವಣಿಗೆ ವಿವಿಧ ಜಾನಪದ ಸಾಂಸ್ಕೃತಿಕ ಕಲಾ ವೈಭವದೊಂದಿಗೆ ಜಾತ್ರ್ಯೋತ್ಸವದ ರೀತಿಯಲ್ಲಿ ವಿಶಿಷ್ಟವಾಗಿ ಸಮಾರಂಭವನ್ನು ಆಚರಿಸಲಾಗುವುದು ಎಂದು  ಸಂಗೇನಹಳ್ಳಿ ಅಶೋಕ್ ಕುಮಾರ್ ಮಾಹಿತಿ ನೀಡಿದರು. 

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ದೊಣ್ಣೆ ಹಳ್ಳಿ  ಗುರುಮೂರ್ತಿ, ಜಿಬಿಟಿ ಪಬ್ಲಿಕೇಶನ್ ಪ್ರಕಾಶ ಮೋಹನ್, ಉಪನ್ಯಾಸಕ ನಾಗಲಿಂಗಪ್ಪ, ಉಪಸ್ಥಿತರಿದ್ದರು.

error: Content is protected !!