ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ದಾವಣಗೆರೆ, ಮಾ.6-  ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳಿಂದ ವ್ಯಕ್ತಿಯೊಬ್ಬರ ಮೇಲೆ  ಮಾರಣಾಂತಿಕ ಹಲ್ಲೆ ನಡೆಸಿದ ನಾಲ್ವರಿಗೆ  ಜೀವಾವಧಿ ಶಿಕ್ಷೆ ಮತ್ತು 44 ಸಾವಿರ ರೂ.ಗಳ ದಂಡವನ್ನು  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದೆ.

ಪಿ. ಅಬ್ದುಲ್ ರೆಹಮಾನ್  ಎಂಬುವರು ಮಲೇಬೆನ್ನೂರು ಅಂಗಡಿಯಲ್ಲಿ ವಹಿವಾಟನ್ನು ಮುಗಿಸಿಕೊಂಡು ಬಸ್ ನಿಲ್ದಾಣಕ್ಕೆ ನಡೆದುಕೊಂಡು ಬರುವಾಗ ಗಂಗಾ ಪರಮೇಶ್ವರ ಶಾಲೆಯ ಹತ್ತಿರ ರಸ್ತೆಯಲ್ಲಿ ಹಿಂದಿನಿಂದ ಬಂದ ಆರೋಪಿತರುಗಳು  ಮಾರಣಾಂತಿಕ ಹಲ್ಲೆ ನಡೆಸಿದ್ದರು. 

 ಈ ಸಂಬಂಧ 29.07.2015 ರಂದು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ   ಪ್ರಕರಣ ದಾಖಲಾಗಿತ್ತು.  ಪಿಎಸ್‌ಐ  ದೇವರಾಜ್ ಟಿ.ವಿ.   ತನಿಖೆ ಕೈಗೊಂಡು,    ಆರೋಪಿತರಾದ  ಮುಜಾವರ್ ಜಬೀವುಲ್ಲಾ, ಮುಜಾವರ್ ರೆಹಮಾನ್,    ಮುಜಾವರ್ ಅಬ್ದುಲ್ಲಾ,   ಮುಜಾವರ್ ಅಬ್ದುಲ್ ಅಜೀಜ್  ಇವರುಗಳ ವಿರುದ್ದ  ನ್ಯಾಯಾಲಯಕ್ಕೆ  ದೋಷರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ವಿಚಾರಣೆ  ನಡೆಸಿದ   ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ. ಎನ್.ಹೆಗ್ಡೆಯವರು, ಇವರ ಮೇಲಿನ ಆರೋಪ ಸಾಬೀತಾಗಿದ್ದರಿಂದ ದಿನಾಂಕ 29-02-2024 ರಂದು ಆರೋಪಿತರಿಗೆ ಜೀವಾವಧಿ ಶಿಕ್ಷೆ ಹಾಗೂ 44,000/- ರೂ ದಂಡ ವಿಧಿಸಿದ್ದು, ಸದರಿ ಮೊತ್ತದಲ್ಲಿ ಸಂತ್ರಸ್ಥ ಅಬ್ದುಲ್ ರೆಹಮಾನ್ ಇವರಿಗೆ 25000/- ರೂ ಪರಿಹಾರ ಹಾಗೂ 19,000/- ರೂ.ಗಳನ್ನು ಸರ್ಕಾರಕ್ಕೆ  ನೀಡುವಂತೆ ತೀರ್ಪು ನೀಡಿದ್ದಾರೆ.  ಪಿರ್ಯಾದಿ ಪರವಾಗಿ ಸರ್ಕಾರಿ ವಕೀಲ  ಮಂಜುನಾಥ್  ವಾದ ಮಂಡಿಸಿದ್ದರು.

error: Content is protected !!