ದಾವಣಗೆರೆ, ಮಾ.6- ಕಲ್ಯಾಣ ಮಂಟಪವೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 74 ಸಾವಿರ ರೂ. ಬೆಲೆಯ 13.45 ಗ್ರಾಂ. ತೂಕದ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.
ಸ್ಥಳೀಯ ಸರಸ್ವತಿ ನಗರದ ಚಿದಾನಂದ ಎಂಬುವವರು ತಮ್ಮ ಸೋದರ ಸಂಬಂಧಿ ಮದುವೆಗೆಂದು ಬಾಪೂಜಿ ಬ್ಯಾಂಕ್ ಸಮುದಾಯ ಭವನಕ್ಕೆ ಬಂದಿದ್ದು, ಕೊಠಡಿಯೊಂದರಲ್ಲಿ ಬ್ಯಾಗುಗಳನ್ನು ಇಟ್ಟು ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದರು.
ಮದುವೆ ಮುಗಿದ ನಂತರ ಕೊಠಡಿಗೆ ಬಂದು ಪರಿಶೀಲಿಸಿದಾಗ ಬ್ಯಾಗ್ನಲ್ಲಿದ್ದ ಆಭರಣಗಳು ಕಳುವಾಗಿದ್ದವು. ಸಿಸಿಟಿವಿ ಪರಿಶೀಲಿಸಲಾಗಿ ವ್ಯಕ್ತಿಯೊಬ್ಬ ನಕಲಿ ಕೀ ಬಳಸಿ ಕೊಠಡಿ ತೆರೆದಿದ್ದು ಕಂಡು ಬಂದಿದೆ. ಈ ಕುರಿತು ಅವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಪೊಲೀಸರು, ಶಾಂತಿ ನಗರದ ಮಸಾಲೆ ವ್ಯಾಪಾರಿ ಆರ್. ಕಿರಣ್ ನಾಯ್ಕ ಎಂಬುವನನ್ನು ಬಂಧಿಸಿದ್ದಾರೆ.
ಬಂಧಿತ ವಿದ್ಯಾನಗರ ಠಾಣೆಯ ಮೂರು ಪ್ರಕರಣಗಳ ಸೇರಿದಂತೆ ಬಡಾವಣೆ ಪೊಲೀಸ್ ಠಾಣೆ, ಬಸವನಗರ ಠಾಣೆ ಹಾಗೂ ಇತರೆ ಕಡೆಯ ಪ್ರಕರಣಗಳಲ್ಲೂ ಭಾಗಿಯಾಗಿರುವುದು ತಿಳಿದು ಬಂದಿದೆ.
ಆರೋಪಿಯನ್ನು ಪತ್ತೆ ಮಾಡಿದ ನಗರ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾವತಿ.ಸಿ.ಶೇತಸನದಿ, ಪಿಎಸ್ಐ ವಿಜಯ್.ಎಂ., ವಿಶ್ವನಾಥ ಹೆಚ್.ಎಸ್ ಹಾಗೂ ಸಿಬ್ಬಂದಿಗಳಾದ ಆನಂದ ಮುಂದಲಮನಿ, ಮಲ್ಲಿಕಾರ್ಜುನ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಯೋಗೀಶ್ ನಾಯ್ಕ, ಗೋಪಿನಾಥ ಬಿ.ನಾಯ್ಕ, ಲಕ್ಷ್ಮಣ್ ಆರ್, ಮಂಜುನಾಥ ಬಿ.ವಿ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲ್ಯಾಘಿಸಿದ್ದಾರೆ.