ಜಿಲ್ಲೆಯಲ್ಲಿ 175 ಸಮಸ್ಯಾತ್ಮಕ ಗ್ರಾಮಗಳು: ಡಿಸಿ ವೆಂಕಟೇಶ್

ದಾವಣಗೆರೆ, ಮಾ.5- ಜಿಲ್ಲೆಯಲ್ಲಿ 5 ತಾಲ್ಲೂಕಿನ 36 ಪಂಚಾಯಿತಿ ವ್ಯಾಪ್ತಿಯಲ್ಲಿ 175 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.

ಮಂಗಳವಾರ ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಅವರು ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ವಿವರಿಸಿದರು.

ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಖಾಸಗಿ ಬೋರ್‍ವೆಲ್‍ಗಳನ್ನು ಗುರುತಿಸಲಾಗಿದೆ. ಇಲ್ಲಿಯವರೆಗೆ 21 ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ತುರ್ತು ಸಂದರ್ಭದಲ್ಲಿ ಟ್ಯಾಂಕರ್‍ಗಳ ಮೂಲಕ  ಕುಡಿಯುವ ನೀರು ಪೂರೈಕೆ ಮಾಡಲು ಎಲ್ಲಾ ತಾಲ್ಲೂಕುಗಳಲ್ಲಿ ಟ್ಯಾಂಕರ್ ಸರಬರಾಜು ಮಾಡಲು ದರಪಟ್ಟಿ ನಿಗದಿಗೆ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ.  ಜಿಲ್ಲೆಯಲ್ಲಿ ಮುಂದಿನ 37 ವಾರಗಳಿಗಾಗುವಷ್ಟು ಮೇವು ಲಭ್ಯವಿದೆ. ಮುಂದಿನ ದಿನಗಳಲ್ಲಿ ಬರಗಾಲದಿಂದ ಮೇವಿನ ಕೊರತೆಯಾಗಬಾರದೆಂದು ಮೇವಿನ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಮೇವು ಕೊರತೆಯಾದಾಗ ನೆರವಿಗೆ ಮೇವಿನ ಬ್ಯಾಂಕ್ ತೆರೆಯಲು ಸ್ಥಳ ಗುರುತಿಸಲಾಗಿದೆ. 

 ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ರೂ.16.78 ಕೋಟಿ ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರರ ಪಿ.ಡಿ.ಖಾತೆಯಲ್ಲಿ ರೂ.2.67 ಕೋಟಿ ಅನುದಾನ ಲಭ್ಯವಿದೆ.  ಬರಪರಿಹಾರದ ಕಂಟ್ರೋಲ್ ರೂಂಗಳು 24×7 ಕೆಲಸ ನಿರ್ವಹಿಸಲು ಸಹಾಯವಾಣಿ ಎಲ್ಲಾ ತಾಲ್ಲೂಕುಗಳಲ್ಲಿ ಸ್ಥಾಪಿಸಲು ಸೂಚಿಸಿ ಈಗಾಗಲೇ ಜಿಲ್ಲಾ ಪಂಚಾಯತ್‍ನಿಂದ 08192-226655 ಸಹಾಯವಾಣಿ ಸ್ಥಾಪಿಸಿ ದಿನದ ಮೂರು ಪಾಳಿಯಲ್ಲಿ ಕೆಲಸ ಮಾಡಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಎಲ್ಲಾ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ರೂ.855 ಕೋಟಿ ಬರನಿರ್ವಹಣೆಯ ಅನುದಾನ ಲಬ್ಯವಿದ್ದು ಇದರೊಂದಿಗೆ ಪ್ರತಿ ಜಿಲ್ಲೆಗೆ ರೂ.2 ಕೋಟಿ ಹೆಚ್ಚುವರಿಯಾಗಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದರು. 

ಬರುವ ಜೂನ್ ಅಂತ್ಯದವರೆಗೆ ಬರ ನಿರ್ವಹಣೆಗೆ ಸೂಕ್ತ ಕ್ರಿಯಾಯೋಜನೆ ರೂಪಿಸಿ, ಸಮರ್ಪಕ ಕುಡಿಯುವ ನೀರು  ಪೂರೈಕೆ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಂಡು ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವೀಡಿಯೋ ಸಂವಾದದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್ ಉಪಸ್ಥಿತರಿದ್ದರು.  ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಬಾನು.ಎಸ್.ಬಳ್ಳಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 

error: Content is protected !!