ಆನ್‍ಲೈನ್ ಅರಿವಿನ ಮನೆಯ ಶರಣ ಚಿಂತನಗೋಷ್ಠಿ

ಆನ್‍ಲೈನ್ ಅರಿವಿನ  ಮನೆಯ ಶರಣ ಚಿಂತನಗೋಷ್ಠಿ

 ದಾವಣಗೆರೆ, ಫೆ. 27 – 12ನೇ ಶತಮಾನದ ಶರಣರ ನಡೆ ನುಡಿ ಸಿದ್ಧಾಂತವನ್ನು ಜನರಿಗೆ ತಲುಪಿಸುವಲ್ಲಿ  ಆನ್‍ಲೈನ್ ಅರಿವಿನ ಮನೆ ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು. 

ನಗರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇವರ  ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಆನ್‍ಲೈನ್ ಅರಿವಿನ ಮನೆಯ ಶರಣ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಲ್ಲಮ ಮತ್ತು ಅಕ್ಕಮಹಾದೇವಿ ಬಹಿರಂಗ ಶುದ್ದಿಯೊಂದಿಗೆ ಅಂತರಂಗ ಶುದ್ಧಿ ಮಾಡಿಕೊಂಡವರು ಎಂದು ಹೇಳಿ ಅಕ್ಕಮಹಾದೇವಿ ಅರಮನೆಯಿಂದ ಗುರುಮನೆಗೆ ಬಂದ ಕಥೆಯನ್ನು  ಹೇಳಿದರು. ನಂತರ ಅಕ್ಕನ ವಚನಗಳಲ್ಲಿ ಕದಳಿಯ ಪರಿಕಲ್ಪನೆ ಎಂಬ ವಿಷಯವಾಗಿ ಡಾ. ಉಷಾದೇವಿ ಹಿರೇಮಠ್ ಉಪನ್ಯಾಸ ನೀಡಿದರು.

 ಕದಳಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ  ಗಾಯತ್ರಿ ವಸ್ತ್ರದ್ ಅವರು ಅಕ್ಕನ ವಚನಗಳಲ್ಲಿ ಸಾಧನಾ ಹಂತದಿಂದ ಸಿದ್ದಿ ಹಂತದವರೆಗೆ ತಲುಪುವ ಪರಿ ನಿಜಕ್ಕೂ ತುಂಬಾ ಅರ್ಥಪೂರ್ಣ ಆಗಿದೆ. ಇಂತಹ ಕನ್ನಡದ ಮೊದಲ ಕವಯತ್ರಿಯನ್ನು ಪಡೆದ ಕನ್ನಡ ನಾಡು ಧನ್ಯ ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಬಿ. ಪರಮೇಶ್ವರಪ್ಪ ಅವರು ಈ ಕಾರ್ಯಕ್ರಮವನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಪಾಕ್ಷಿಕವಾಗಿ ಆರಂಭಿಸಲಾಗಿದೆ, ಮುಂದಿನ ದಿನಗಳಲ್ಲಿ ಪ್ರತಿ ಎರಡು ಮತ್ತು ನಾಲ್ಕನೇ ಸೋಮವಾರ  ನಿರಂತರವಾಗಿ ನಡೆಸಲಾಗುವುದು ಎಂದು ಹೇಳಿದರು. ಬಿ.ಟಿ ಪ್ರಕಾಶ್ ಪ್ರಾರ್ಥಿಸಿದರು. ಎನ್.ಎಸ್. ರಾಜು ಸ್ವಾಗತಿಸಿ ದರು. ಆರ್. ಸಿದ್ದೇಶಪ್ಪ ಗೌರವಿಸಿದರು. ಭರಮಪ್ಪ ನಿರೂಪಿಸಿದರು.

error: Content is protected !!