ನಗರದಲ್ಲಿ ಇಂದು ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶ

ದಾವಣಗೆರೆ, ಫೆ. 25- ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶವನ್ನು ನಾಳೆ ದಿನಾಂಕ 26 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬೀದಿ ಬದಿ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ದುಗ್ಗಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಸಮಾವೇಶದಲ್ಲಿ ವ್ಯಾಪಾರಸ್ಥರ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ. ಈಗಾಗಲೇ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಹೋರಾಟವನ್ನು ಕೂಡ ಮಾಡುತ್ತಿದ್ದೇವೆ. ಈ ಹಿಂದೆ ಬೀದಿ ಬದಿಯ ವ್ಯಾಪಾರಸ್ಥರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಡಿದ್ದರ ಫಲವಾಗಿ ಒಂದಿಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದರು.

2018 ರಲ್ಲಿ ಸ್ಮಾರ್ಟ್ ಸಿಟಿ ನಿಗಮವು ಕೆ.ಆರ್.ಮಾರ್ಕೆಟ್‌ನಲ್ಲಿ ಕಾಮಗಾರಿಯ ನೆಪವೊಡ್ಡಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡಿತ್ತು. ಇದರ ವಿರುದ್ಧ ಬೀದಿ ಬದಿ ವ್ಯಾಪಾರಸ್ಟರು ಐತಿಹಾಸಿಕ ಹೋರಾಟ ಮಾಡಿ ಮಾರುಕಟ್ಟೆಯನ್ನು ಉಳಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ದಾವಣಗೆರೆ ನಗರ ಹಾಗೂ ಎಲ್ಲಾ ತಾಲ್ಲೂಕುಗಳಲ್ಲಿ ಇರುವ ನಿಜವಾದ ಬೀದಿ ಬದಿಯ ವ್ಯಾಪಾರಸ್ಥರಿಗೆ ಸ್ಮಾರ್ಟ್ ಗುರುತಿನ ಚೀಟಿ ನೀಡಬೇಕು. ಬೀದಿ ಬದಿಯ ವ್ಯಾಪಾರಸ್ಥರಿಗೆ ನಿವೇಶನ ನೀಡಬೇಕು. ಜಕಾತಿ ವಸೂಲಿಯನ್ನು ಖಾಸಗಿಯವರಿಗೆ ಯಾವುದೇ ಕಾರಣಕ್ಕು ನೀಡಬಾರದು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಎಸ್. ಇಸ್ಮಾಯಿಲ್, ಉಪಾಧ್ಯಕ್ಷ ಹೆಚ್.ಸಿ. ಮಲ್ಲಪ್ಪ, ಶೀಲಾ ಶ್ರೀನಿವಾಸ್, ಕೆ. ಭಾರತಿ, ಪೂಜಾ ನಂದಿಹಳ್ಳಿ, ಸಲೀಂ, ಜಬೀವುಲ್ಲಾ, ಕೆ. ಕೃಷ್ಣಮೂರ್ತಿ ಮತ್ತಿತರರು ಇದ್ದರು. 

error: Content is protected !!