ಸಂವಿಧಾನ ಜಾಗೃತಿ ಜಾಥಾದ ಶೇ.95 ಸಂಚಾರ ಪೂರ್ಣ : ಡಿಸಿ ವೆಂಕಟೇಶ್‌

ದಾವಣಗೆರೆ, ಫೆ. 25 – ಗಣರಾಜ್ಯೋತ್ಸವ ದಿನದಿಂದ ಜಿಲ್ಲೆಯಲ್ಲಿ ಆರಂಭಿಸಲಾಗಿದ್ದ ಸಂವಿಧಾನ ಜಾಗೃತಿ ಜಾಥಾ ಇದುವರೆಗೂ 192 ಸ್ಥಳೀಯ ಸಂಸ್ಥೆಗಳಲ್ಲಿ ಸಂಚರಿಸಿ, ಶೇ.95ರಷ್ಟು ಸಂಚಾರ ಪೂರ್ಣಗೊಳಿಸಿದೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದರು.

ಸಂವಿಧಾನ ಜಾಗೃತಿ ಜಾಥಾ ಕುರಿತಂತೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಥಾಗೆ ಸಾಮಾಜಿಕ ಜಾಲತಾಣಗಳಲ್ಲಿ 36.25 ಲಕ್ಷ ಲೈಕ್‌ಗಳು ದೊರೆತಿವೆ ಎಂದು ತಿಳಿಸಿದರು.

ಜಾಥಾ ವೇಳೆ ಸೈಕಲ್ ರಾಲಿ, ಬೈಕ್ ರಾಲಿ, ಕ್ಯಾಂಡಲ್ ಮಾರ್ಚಿಂಗ್, ಎತ್ತಿನಗಾಡಿ ಮೆರವಣಿಗೆ, ರಂಗೋಲಿ ಸ್ಪರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಅನೇಕ ಸರ್ಕಾರಿ ಕಾರ್ಯಕ್ರಮ, ಸಭೆಗಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಪ್ರಸ್ತಾವನೆ ಓದುವ ಮೂಲಕ ಪ್ರತಿಜ್ಞೆ ಮಾಡಲಾಗಿದೆ ಎಂದರು.

ಸಂವಿಧಾನ ಜಾಥಾ ಕಾರ್ಯಕ್ರಮವನ್ನು ಮಾರ್ಚ್ 7ರವರೆಗೂ ಮುಂದುವರೆಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಾಥಾದಲ್ಲಿ ಭಾಗವಹಿಸಬೇಕು ಎಂದೂ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಇಟ್ನಾಳ್, ಗ್ರಾಮಾಂತರ ಪ್ರದೇಶದಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ವ್ಯವಸ್ಥಿತ ಹಾಗೂ ಪರಿಣಾಮಕಾರಿಯಾಗಿ ನಡೆಸಲಾಗಿದೆ. ಪ್ರತಿದಿನ 7 ಗ್ರಾಮ ಪಂಚಾಯ್ತಿಗಳ ಕೇಂದ್ರ ಸ್ಥಾನಗಳಲ್ಲಿ ಸಂಚರಿಸಿದ್ದು, ಜನರು ಬಹಳ ಉತ್ಸುಕತೆಯಿಂದ ಭಾಗವಹಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಉಪಸ್ಥಿತರಿದ್ದರು.

error: Content is protected !!