ಎಸ್ಸೆಸ್ಸೆಲ್ಸಿ ಪೂರ್ವ ಸಿದ್ದತಾ ಪರೀಕ್ಷೆ: ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರುವುದು ಅವೈಜ್ಞಾನಿಕ : ಎಐಡಿಎಸ್ಒ ಖಂಡನೆ

ದಾವಣಗೆರೆ, ಫೆ.25- ಎಸ್ಸೆಸ್ಸೆಲ್ಸಿ ಪೂರ್ವ ಸಿದ್ದತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕು ಎಂಬ ಸರ್ಕಾರದ ಮೌಖಿಕ ಆದೇಶವನ್ನು  ಎಐಡಿಎಸ್ಒ   ತೀವ್ರವಾಗಿ ಖಂಡಿಸುತ್ತದೆ  ಎಂದು  ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್  ತಿಳಿಸಿದ್ದಾರೆ

ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಗಳನ್ನು ಬರೆಯಲು ಈ ಪೂರ್ವ ಸಿದ್ದತಾ ಪರೀಕ್ಷೆಗಳ ಮೂಲಕ ತಯಾರು ಮಾಡಲಾಗುತ್ತದೆ. ಯಾವ ರೀತಿ ಪರೀಕ್ಷೆಗಳನ್ನು ಬರೆಯಬೇಕು, ಉತ್ತರ ಪತ್ರಿಕೆಯ ಮೊದಲ ಪುಟವನ್ನು ಯಾವ ರೀತಿ ಭರ್ತಿ ಮಾಡಬೇಕು ಎಂಬುವುದನ್ನು ಪೂರ್ವಸಿದ್ಧತಾ ಪರೀಕ್ಷೆಯ ವೇಳೆಯೇ ಕಲಿಸಿ ಕೊಡಲಾಗುತ್ತದೆ. ಅದಕ್ಕಾಗಿ ಸರ್ಕಾರವೇ ಉತ್ತರ ಪತ್ರಿಕೆಗಳನ್ನು ಪೂರ್ವ ಸಿದ್ದತಾ ಪರೀಕ್ಷಾ ಸಂದರ್ಭದಲ್ಲಿ ಸರಬರಾಜು ಮಾಡಬೇಕಾಗುತ್ತದೆ. ಹೀಗಿರುವಾಗ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕು ಎಂಬ ಸರ್ಕಾರದ ನಿಲುವು ಅವೈಜ್ಞಾನಿಕವಾಗಿದೆ.

ಮೊದಲಿಗೆ, ಶಿಕ್ಷಣಕ್ಕೆ ಬಜೆಟ್ ಕಡಿತಗೊಳಿಸಿ ನಂತರ, ಇಂತಹ ಆದೇಶ ಗಳ ಮೂಲಕ ಸರ್ಕಾರವು ಒಟ್ಟಾರೆಯಾಗಿ ಶಿಕ್ಷಣದ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಬಡ ಮಕ್ಕಳ ಮೇಲೆ ಈ ರೀತಿಯ ಯಾವುದೇ ಹೊರೆಯನ್ನು ಹೇರದೇ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಅವರು ಒತ್ತಾಯಿಸಿರುವುದಾಗಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ. ಎಸ್. ಸುಮನ್ ತಿಳಿಸಿದ್ದಾರೆ.

error: Content is protected !!