ದಾವಣಗೆರೆ, ಫೆ. 22- ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಶ್ರೀ ಕ್ಷೇತ್ರ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 24 ರಿಂದ 28 ರವರೆಗೆ ಭಾರತ ಹುಣ್ಣಿಮೆ ಕಾರ್ಯಕ್ರಮ ಹಾಗೂ ಮೈಲಾರಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಾಲತೇಶ ರಾವ್ ಜಾಧವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 11 ವರ್ಷಗಳಿಂದ ದಾವಣಗೆರೆಯಿಂದ ಮೈಲಾರ ಕ್ಷೇತ್ರಕ್ಕೆ ಕೇವಲ ಇಬ್ಬರಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಈ ವರ್ಷ 550 ರಿಂದ 600 ಜನ ಭಕ್ತಾದಿಗಳು ಪಾಲ್ಗೊಳ್ಳುವರು ಎಂದು ಹೇಳಿದರು.
ನಾಡಿದ್ದು ದಿನಾಂಕ 23 ರ ಶುಕ್ರವಾರ ಸಂಜೆ 4 ಕ್ಕೆ ನಗರದ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ಬೀಳ್ಕೊಡುಗೆ ಸಮಾರಂಭದ ನಂತರ ಪಾದಯಾತ್ರೆ ಪ್ರಾರಂಭಿಸಲಾಗುವುದು. ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮತ್ತಿತರೆ ಗಣ್ಯರು ಭಾಗವಹಿಸಲಿದ್ದಾರೆ.
ದಾವಣಗೆರೆಯಿಂದ ಹೊರಡುವ ಪಾದ ಯಾತ್ರಿಗಳು, ಹರಿಹರ, ಕವಲೆತ್ತು ಮೂಲಕ ಮಾರ್ಗದ ದುರುಗಮ್ಮ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆಯಲಿ ದ್ದಾರೆ. ನಂತರ ರಾಣೇ ಬೆನ್ನೂರು, ದೇವರಗುಡ್ಡ, ಹೊನ್ನತ್ತಿ ಮೂಲಕ ಮೈಲಾರ ತಲುಪಲಿದ್ದಾರೆ. 80 ಕಿಮೀ ದೂರದ ಪಾದಯಾತ್ರೆಯಲ್ಲಿ ಭಾಗವಹಿಸುವ ಎಲ್ಲರಿಗೂ ಊಟ, ಔಷಧಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುವುದು. ಮೈಲಾರದ ಜಾತ್ರೆಗೆ ಬರುವಂತಹವರಿಗೆ ದಾವಣಗೆರೆ ಭಕ್ತಾದಿಗಳಿಂದ ಇದೇ ದಿನಾಂಕ 25 ಮತ್ತು 26 ರಂದು ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಕೆ.ಎಚ್ ಮಲ್ಲೇಶ್ ಕಂಡ್ರಳ್ಳಿ, ಕಾರ್ಯದರ್ಶಿ ವೀರಣ್ಣ, ಖಜಾಂಚಿ ಎಮ್. ಜಯಪ್ಪ, ಗೋಪಾಲ್ ರಾವ್ ಸಾವಂತ್ ಹಾಗೂ ಪಾದಯಾತ್ರೆ ರೂವಾರಿಗಳಾದ ಮಾಲತೇಶ್, ನಿಂಗರಾಜು, ಗುಡ್ಡಪ್ಪ, ಸಿದ್ದಪ್ಪ, ಟೈಟಾನಿಕ್ ಮಾಲತೇಶ್ ಮತ್ತಿತರರಿದ್ದರು.