ಕೂಲಿ ಕಾರ್ಮಿಕರ ಧರಣಿ ಸತ್ಯಾಗ್ರಹ

ದಾವಣಗೆರೆ, ಫೆ. 20- ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕೂಲಿ ಹಣ ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಯೋಜನೆ ಅನುಷ್ಠಾನದಲ್ಲಾಗುತ್ತಿರುವ ಲೋಪದೋಷಗಳನ್ನು ಸರಿಪಡಿಸಬೇಕು ಹಾಗೂ ಬರಗಾಲದ ಪರಿಣಾಮವಾಗಿ ಹೆಚ್ಚುವರಿ ಇನ್ನೂ 50 ಮಾನವ ದಿನಗಳನ್ನು ನೀಡಲು ಆಗ್ರಹಿಸಿ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಜಿಲ್ಲಾ ಪಂಚಾಯತ್ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು.

ಸಂಘಟನೆಯ ಅಧ್ಯಕ್ಷ ಎ.ಕೆ. ಗುಡದಯ್ಯ ಮಾತನಾಡಿ ಚನ್ನಗಿರಿ, ಹೊನ್ನಾಳಿ, ದಾವನಗೆರೆ ಮತ್ತು ಹರಿಹರ ತಾಲ್ಲೂಕುಗಳಲ್ಲಿ ಅರ್ಹ ಕಾರ್ಮಿಕರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಲ್ಲಿ ಕಾರ್ಯನಿರ್ವಹಿಸುತ್ತಾ ಬರುತ್ತಿದ್ದಾರೆ. ಕಾಯ್ದೆ ಪ್ರಕಾರ ದುಡಿಯುವ ಕೈಗಳಿಗೆ ಉದ್ಯೋಗ ಮತ್ತು ಕೂಲಿ ಹಣ ಪಾವತಿಸಬೇಕಾಗಿದೆ. ಆದರೆ ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ಹಣ ಪಾವತಿ ಮಾಡುತ್ತಿಲ್ಲ. ಈ ಬಗ್ಗೆ ಇಲಾಖೆಯ ಗಮನಕ್ಕೆ ತಂದಿದ್ದರೂ ಸಹ, ಪ್ರಯೋಜನವಾಗುತ್ತಿಲ್ಲ. ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಅನುಷ್ಠಾನ ಮತ್ತು ಉಸ್ತುವಾರಿ ಅಧಿಕಾರಿಗಳು ಸೂಕ್ತ ಕ್ರಮವಹಿಸುತ್ತಿಲ್ಲ ಎಂದರು.

ಧರಣಿ ಸತ್ಯಾಗ್ರಹದಲ್ಲಿ ಆರ್. ತಿಪ್ಪೇರುದ್ರಪ್ಪ, ಕೆ.ಎಂ. ವೀರಮ್ಮ, ನೇತ್ರಾವತಿ, ರೂಪಾನಾಯ್ಕ, ರೇಖಾ, ಗಂಗಮ್ಮ, ಹೇಮಾವತಿ, ರಾಜಪ್ಪ, ಶಾಂತಮ್ಮ, ತಿಪ್ಪೇಶ್, ಮುದುಕಪ್ಪ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!