ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕುಪತ್ರಕ್ಕಾಗಿ ಇಂದು ಪ್ರತಿಭಟನೆ

ದಾವಣಗೆರೆ, ಫೆ.14- ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ವಿಳಂಬ ಧೋರಣೆ ಖಂಡಿಸಿ ನಾಳೆ ದಿನಾಂಕ 15ರ ಗುರುವಾರ ಜಿಲ್ಲಾದಿಕಾರಿ ಕಚೇರಿ ಎದುರು ಜನ ಜಾನುವಾರುಗಳೊಂದಿಗೆ ಅನಿರ್ದಿಷ್ಟ ಚಳುವಳಿ ಹಾಗೂ ಜೈಲ್ ಭರೋ ಚಳವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದು  ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳ ರೈತರು 30-40 ವರ್ಷಗಳಿಂದ ಫಾರಂ 50, 53, 57 ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಹಕ್ಕುಪತ್ರ ವಿತರಿಸಿಲ್ಲ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ 2500 ಜನ ಬಗರ್ ಹುಕ್ಕುಂ ಸಾಗುವಳಿದಾರರಿದ್ದಾರೆ. ಈ ಪೈಕಿ ಜಗಳೂರು, ಹರಿಹರ ತಾಲ್ಲೂಕಿನಲ್ಲಿಯೇ ಹೆಚ್ಚು. ಇಲ್ಲಿವರೆಗೆ ಸುಮಾರು 800 ಜನರಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ ಎಂದರು.

ಹರಿಹರ ತಾಲ್ಲೂಕು ಮಲೇಬೆನ್ನೂರು, ಕೊಮಾರನಹಳ್ಳಿ, ಕೊಪ್ಪ, ಹಾಲಿವಾಣ ಇನ್ನಿತರೆ ಗ್ರಾಮಗಳಲ್ಲಿ ಜಂಟಿ ಸಮೀಕ್ಷೆ ನಡೆಸಿ, ವರದಿ ನೀಡಿದ್ದರೂ ಹಕ್ಕುಪತ್ರ ವಿತರಣೆಯಾಗಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಂಪುರದ ಬಸವರಾಜ, ಮಾಯಕೊಂಡದ ಅಶೋಕ, ಮಂಜನಾಥ ವಕೀಲರು, ಕೋಗಳಿ ಮಂಜುನಾಥ, ಹನುಮಂತಪ್ಪ ಬಾಡ, ಬಸಣ್ಣ ಇತರರಿದ್ದರು.

error: Content is protected !!