ಠೇವಣಿದಾರರಿಂದ ಮುಖ್ಯಮಂತ್ರಿ, ಸಹಕಾರ ಸಚಿವರಿಗೆ ಮೊರೆ
ದಾವಣಗೆರೆ,ಫೆ.9- ನಗರದ ಲಕ್ಷ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಠೇವಣಿದಾರರ ಸಂಘದ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ, ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಹಕಾರ ಸಚಿವರೂ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಬ್ರಾಹ್ಮಣ ಸಮಾಜದ ಸೊಸೈಟಿಯೆಂದೇ ಪ್ರಖ್ಯಾತವಾಗಿದ್ದ ಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 2010-11 ರಿಂದಲೇ ಕೋಟಿಗಟ್ಟಲೇ ಅವ್ಯವಹಾರ ನಡೆದಿದ್ದು, 2016-17 ರಿಂದಲೂ ಅವಧಿ ಮುಕ್ತಾಯವಾದರೂ ಹಣ ವಾಪಸ್ ನೀಡದೇ ಠೇವಣಿ ಇಟ್ಟ ಜನ ಬೀದಿ ಪಾಲಾಗಿದ್ದಾರೆ. ನಿರ್ದೇಶಕರೆಲ್ಲರೂ ಪ್ರಭಾವಶಾಲಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದು, ಸಮಾಜದ ಘನತೆಗೆ ಕುಂದು ತಂದಿದ್ದಾರೆ.
ಈಗಾಗಲೇ ನಿರ್ದೇಶಕರುಗಳ ಮೇಲೆ ಎಫ್ಐಆರ್ ದಾಖಲಾಗಿದ್ದು, ಮುಂದಿನ ತನಿಖೆಗೆ ಸಿಐಟಿ ಬೆಂಗಳೂರಿಗೆ ಕಳಿಸಿದ್ದು ತನಿಖೆಯಾಗಬೇಕಾಗಿದ್ದು, ಯಾವುದೇ ಪ್ರಗತಿ ಆಗಿರುವುದಿಲ್ಲ.
ನಿರ್ದೇಶಕರುಗಳ ಆಸ್ತಿಗಳನ್ನು 2023 ಮಾರ್ಚ್ ತಿಂಗಳಲ್ಲಿ ಕರ್ನಾಟಕ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದು, ಕರ್ನಾಟಕದ ಗೆಜೆಟ್‌ನಲ್ಲಿ ಇವರೆಲ್ಲ ಮೋಸ ಮಾಡಿದ್ದಾರೆಂದು ಉಲ್ಲೇಖಿಸಲಾಗಿದೆ.
ಅನೇಕ ಜನ ಠೇವಣಿದಾರರು ಕೋವಿಡ್‌ನಿಂದಲೂ, ವೃದ್ಧಾಪ್ಯದಿಂದಲೂ ನಿಧನರಾಗಿದ್ದಾರೆ. ಅಂಗವಿಕಲರು, ಮಹಿಳೆಯರು, ಹಿರಿಯ ನಾಗರಿಕರು, ಪಿಂಚಣಿದಾರರು, ಮದುವೆಗೆಂದು ಇಟ್ಟಿದ್ದ ಹಣ ಬಾರದೇ ಕೆಲ ಪೋಷ ಕರೂ ಸಹ ನಿಧನರಾಗಿದ್ದು ಎಲ್ಲರೂ ಬೀದಿ ಪಾಲಾಗಿರು ತ್ತಾರೆ. ಸೊಸೈಟಿಯು ಸ್ವಂತ ಕಟ್ಟಡ ಹೊಂದಿದ್ದು, 2018 ರಲ್ಲಿ ಡಿಸಿಸಿ ಬ್ಯಾಂಕ್‌ಗೆ 2 ಕೋಟಿ ಆಧಾರ ಮಾಡಿದ್ದು, ಆ ಹಣವನ್ನು ದುರುಪಯೋಗ ಮಾಡಿಕೊಂಡಿರುತ್ತಾರೆ ಎಂದು ಸಂಘದ ಅಧ್ಯಕ್ಷ ಎಂ.ಬಿ. ಜಗನ್ನಾಥರಾವ್ ದೂರಿದ್ದಾರೆ.