ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇಂದು ಮತ್ತು ನಾಳೆ 6ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರಾ ಮಹೋತ್ಸವ ಜರುಗಲಿದ್ದು, ಅದಕ್ಕಾಗಿ ಗುರುಪೀಠ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಮಾಜಿ ಸಚಿವ ಆನಂದ್‌ ಸಿಂಗ್ ಹಾಗೂ ಮತ್ತಿತರೆ ದಾನಿಗಳ ನೆರವಿನಿಂದ ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡು ಕಳೆದ ವರ್ಷ ಲೋಕಾರ್ಪಣೆ ಗೊಂಡಿರುವ ನೂತನ ರಥದಲ್ಲಿ ವಾಲ್ಮೀಕಿ ರಥೋತ್ಸವ ನಾಳೆ ದಿನಾಂಕ ಶುಕ್ರವಾರ ಬೆಳಗ್ಗೆ 9 ಗಂಟೆಗೆ ನಾಡಿನ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಜರುಗಲಿದೆ. 

ಸಾಂಸ್ಕೃತಿಕ ಉತ್ಸವದ ಮೆರಗು : ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ ಅವರ ನೇತೃತ್ವದಲ್ಲಿ ಕಲಾವಿದರಿಂದ ವಿಭಿನ್ನ ರೀತಿಯ ಸಾಂಸ್ಕೃತಿಕ ಶೈಲಿಯ ಸಾಂಪ್ರದಾಯಿಕ ನೃತ್ಯಗಳು ಇಂದು ಸಂಜೆ ಪ್ರದರ್ಶನಗೊಳ್ಳಲಿವೆ. ರಾತ್ರಿ 10.30 ಕ್ಕೆ ಹಾಸನ ಜಿಲ್ಲಾ ವಾಲ್ಮೀಕಿ ನಾಯಕ ಕಲಾ ಸಂಘದವರಿಂದ ಸಂಪೂರ್ಣ ರಾಮಾಯಣ ನಾಟಕದ ಪ್ರದರ್ಶನ ಏರ್ಪಡಿಸಲಾಗಿದೆ.

ಸಾಮೂಹಿಕ ವಿವಾಹ : ಇಂದು 9 ಗಂಟೆಗೆ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ  ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸಚಿವ ಸತೀಶ್ ಜಾರಕಿಹೊಳಿ, ಜಾತ್ರಾ ಸಮಿತಿ ಸಂಚಾಲಕ ಬಿ.ಶಿವಪ್ಪ, ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ 11 ರಿಂದ ಮಹಿಳಾ ಗೋಷ್ಠಿ ಹಾಗೂ ರಾಜ್ಯಮಟ್ಟದ ಮಹಿಳಾ ಜಾಗೃತಿ ಸಮಾವೇಶವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ ಉದ್ಘಾಟಿಸುವರು. ದೇವದುರ್ಗದ ಶಾಸಕರಾದ ಕರೆಮ್ಮ ನಾಯಕ ಅಧ್ಯಕ್ಷತೆ ವಹಿಸುವರು. ಮಠದ ಧರ್ಮದರ್ಶಿ ಶ್ರೀಮತಿ ಶಾಂತಲಾ ರಾಜಣ್ಣ ಸೇರಿದಂತೆ, ಇನ್ನೂ ಅನೇಕ ಮಹಿಳಾ ಸಾಧಕಿಯರು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 3 ಕ್ಕೆ ನಡೆಯುವ ನೌಕರರ ಗೋಷ್ಠಿ ಯನ್ನು ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಉದ್ಘಾಟಿಸಲಿದ್ದಾರೆ. ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸುವರು. ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಹೆಚ್.ಎಸ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಬಕಾರಿ ಆಯುಕ್ತ ಡಾ. ವೈ.ಮಂಜುನಾಥ್ ಪ್ರತಿಭಾ ಪುರಸ್ಕಾರ ನಡೆಸಿಕೊಡಲಿದ್ದಾರೆ.  ಸಂಜೆ 6 ಗಂಟೆಗೆ ಸಂಘಟನಾ ಗೋಷ್ಠಿಯನ್ನು ಮಾವಳ್ಳಿ ಶಂಕರ್ ಉದ್ಘಾಟಿಸಲಿದ್ದು, ಜಿ.ಟಿ. ಚಂದ್ರಶೇಖರಪ್ಪ ಅಧ್ಯಕ್ಷತೆ ವಹಿಸುವರು. ಕೆ.ಎಸ್.ಮೃತ್ಯುಂಜಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ವಕೀಲ ಅನಂತನಾಯ್ಕ್ ಉಪನ್ಯಾಸ ನೀಡಲಿದ್ದಾರೆ.

error: Content is protected !!