ಕಾರಾಗೃಹದ ಗ್ರಂಥಾಲಯದಲ್ಲಿ ಗಾಂಜಾ, ಡಾಟಾ ಕೇಬಲ್‌ ಪತ್ತೆ

ದಾವಣಗೆರೆ, ಫೆ.6- ಇಲ್ಲಿನ ಜಿಲ್ಲಾ ಕಾರಾಗೃಹದ ಗ್ರಂಥಾಲಯದಲ್ಲಿ ಫೆಬ್ರವರಿ 4ರಂದು ನಿಷೇಧಿತ ಗಾಂಜಾ ಸೊಪ್ಪು ಹಾಗೂ ಮೊಬೈಲ್ ಡಾಟಾ ಕೇಬಲ್‌ಗಳು ಪತ್ತೆಯಾಗಿವೆ. ಜ.28ರಂದು ಕಾರಾಗೃಹದಲ್ಲಿ ಕೈದಿಗಳ ನಡುವೆ ಗಲಾಟೆ ನಡೆದಿತ್ತು. ಗಲಾಟೆ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಜೈಲಿಗೆ ಭೇಟಿ ನೀಡಿ ಹಲ್ಲೆಗೊಳಗಾದ ಕೈದಿಗಳ ವಿಚಾರಣೆ ನಡೆಸಿದ್ದರು. ಆಗ ಈ ಮಾಹಿತಿ ಬಹಿರಂಗವಾಗಿದೆ.

ವಿಚಾರಣಾಧೀನ ಕೈದಿಗಳಾದ ಸುನಿಲ್, ಪವನ್‌ಕುಮಾರ್, ಇಮ್ರಾನ್ ಖಾನ್, ಸಲ್ಮಾನ್, ಮಾದಕ ದ್ರವ್ಯ ಸೇವಿಸಿ ಸಹ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದರು. ಇವರ ರಕ್ತ, ಮೂತ್ರದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮಾದಕ ದ್ರವ್ಯದ ಅಂಶ ಪತ್ತೆಯಾಗಿದೆ. ಪುಸ್ತಕವೊಂದರಲ್ಲಿ 3.5 ಗ್ರಾಂ ಗಾಂಜಾ ಸೊಪ್ಪು ಹಾಗೂ ಮೊಬೈಲ್ ಚಾರ್ಜರ್ ಅಡಗಿಸಿಟ್ಟಿದ್ದನ್ನು ಕೈದಿ ಸಂಜೀತ್ ಸಿಂಗ್ ಎಂಬಾತ ನ್ಯಾಯಾಧೀಶರಿಗೆ ತೋರಿಸಿದ್ದ. ಗ್ರಂಥಾಲಯದ ತಪಾಸಣೆ ವೇಳೆ ಪೆನ್‌ಡ್ರೈವ್ ಕೂಡ ದೊರೆತಿದೆ.

ಈ ಸಂಬಂಧ ಜಿಲ್ಲಾ ಕಾರಾಗೃಹದ ಪ್ರಭಾರ ಅಧೀಕ್ಷಕಿ ಭಾಗೀರಥಿ ಎಲ್. ಹಾಗೂ ಜೈಲರ್ ಕೆ.ಎಸ್.ಮಾನ್ವಿ ವಿರುದ್ಧ ಶಿವಮೊಗ್ಗ ಕೇಂದ್ರ ಕಾರಾಗೃಹದ ಅಧೀಕ್ಷಕಿ ಅನಿತಾ ಆರ್. ಅವರು ಇಲ್ಲಿನ ಬಸವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

error: Content is protected !!